HEALTH TIPS

ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಫೆ. 13ಕ್ಕೆ ವಿಚಾರಣೆ ಮುಂದೂಡಿಕೆ

ನವದೆಹಲಿ: 2002ರ ಗೋಧ್ರಾ ಗಲಭೆಯ ಸಂಬಂಧ ಗುಜರಾತ್‌ ಸರ್ಕಾರ ಹಾಗೂ ಪ್ರಕರಣದ ಹಲವು ದೋಷಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಫೆಬ್ರುವರಿ 13ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಹಾಗೂ ಅರವಿಂದ್ ಕುಮಾರ್ ಅವರು ಇದ್ದ ಪೀಠ ವಿಚಾರಣೆ ನಡೆಸುತ್ತಿದ್ದು, ಇನ್ನು ಮುಂದೆ ಅರ್ಜಿಯ ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

2002ರ ಫೆಬ್ರುವರಿ 27ರಂದು ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಗುಜರಾತ್‌ನ ಗೋಧ್ರಾದಲ್ಲಿ ದುರುಳರು ಬೆಂಕಿ ಹಚ್ಚಿದ್ದರಿಂದ 59 ಮಂದಿ ಸಾವಿಗೀಡಾಗಿದ್ದರು. ಇದರಿಂದ ಅಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು.

ಪ್ರಕರಣ ಸಂಬಂಧ ಹಲವರನ್ನು ದೋಷಿ ಎಂದು ಕೆಳನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದ ಗುಜರಾತ್ ಹೈಕೋರ್ಟ್, 11 ಮಂದಿ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು

11 ಮಂದಿಯ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಗುರುವಾರದ ವಿಚಾರಣೆಯ ವೇಳೆ ದೋಷಿ ಪರ ಹಾಜರಾಗಿದ್ದ ವಕೀಲರೊಬ್ಬರು ಯಾವುದೇ ಸಾಕ್ಷ್ಯಗಳನ್ನು ಸಲ್ಲಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ನ್ಯಾ. ಮಹೇಶ್ವರಿ, 'ನಮಗೆ ಗೊತ್ತಿಲ್ಲ. ನಾವು ಇದನ್ನು ವಿಚಾರಣೆ ನಡೆಸುತ್ತೇವೆ, ಇದನ್ನು ಹಿಂದೆಯೂ ಹೇಳಿದ್ದೇವೆ. ಇನ್ನು ಮುಂದೂಡುವುದಿಲ್ಲ. ಈಗಾಗಲೇ ಈ ಪ್ರಕರಣ ಕಳೆದ ಒಂದು ವರ್ಷದಲ್ಲಿ ಕನಿಷ್ಠ 5 ಬಾರಿ ಮುಂದೂಡಲಾಗಿದೆ. ನಾನು ಇದನ್ನು ಮುಂದೂಡುವುದಿಲ್ಲ' ಎಂದು ಹೇಳಿದರು.

ಕೆಲವು ಅಪರಾಧಿಗಳು ಸಲ್ಲಿಸಿರುವ ಕ್ಷಮಾದಾನ ಅರ್ಜಿಗಳ ವಿಚಾರಣೆ ಬಾಕಿ ಉಳಿದಿದೆ ಎಂದು ವಕೀಲರು ಈ ವೇಳೆ ಹೇಳಿದರು.

ಈ ವೇಳೆಯೂ ಅರ್ಜಿಯ ವಿಚಾರಣೆಯನ್ನು ಮುಂದೂಡಲು ನಿರಾಕರಿಸಿದ ನ್ಯಾಯಪೀಠವು, 'ಕ್ರಿಮಿನಲ್ ಪ್ರಕರಣ ಹಾಗೂ ಕ್ಷಮಾದಾನ ಅರ್ಜಿಗಳನ್ನು ಏಕಕಾಲದಲ್ಲಿ ವಿಚಾರಣೆ ನಡೆಸಬೇಕಿಲ್ಲ ಎಂದು ಮುಖ್ಯನ್ಯಾಯಮೂರ್ತಿಗಳ ಕಚೇರಿಯಿಂದ ನಿರ್ದೇಶನವಿದೆ' ಎಂದಿತು.

ಈ ವೇಳೆ ಮತ್ತೊಬ್ಬ ದೋಷಿ ಪರ ಹಾಜರಾಗಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದರ ವಿರುದ್ಧ ಗುಜರಾತ್ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಬೇಕು' ಎಂದು ಮನವಿ ಮಾಡಿದರು.

20 ವರ್ಷಗಳೇ ಕಳೆದವು. ನನ್ನ ಕಕ್ಷಿದಾರರಿಗೆ ಗಲ್ಲು ಶಿಕ್ಷೆ ವಿಧಿಸಿಲ್ಲ. ಈ ಪೀಠವು ಅವರ ತಪ್ಪನ್ನು ದೃಢೀಕರಿಸಬೇಕು. ಬಳಿಕ ಗಲ್ಲು ಶಿಕ್ಷೆಯ ವಿಚಾರ ಬರಲಿದೆ. ಇದೆಲ್ಲಾ ಆಗುವಾಗ ಸಮಯ ಬೇಕೇ ಬೇಕು' ಎಂದು ಹೆಗ್ಡೆ ಹೇಳಿದರು.

ಉಳಿದ ಅಪರಾಧಿಗಳ ಪರ ಹಾಜರಿದ್ದ ವಕೀಲರೂ ಸಮಯಾವಕಾಶ ಕೋರಿದ್ದರಿಂದ ಫೆ. 13ಕ್ಕೆ ವಿಚಾರಣೆಯನ್ನು ಮುಂದೂಡಿತು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries