ಇಸ್ಲಾಮಾಬಾದ್: ಅಲ್ ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ತಪ್ಪಿತಸ್ಥರೆಂದು ಪಾಕಿಸ್ತಾನದ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ. ಅವರಿಗೆ ಕ್ರಮವಾಗಿ 14 ಮತ್ತು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಿವಿಧ ಕಾರಣಗಳಿಂದ ಮೂರು ಬಾರಿ ಮುಂದೂಡಲ್ಪಟ್ಟಿದ್ದ ತೀರ್ಪನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಇಂದು ಪ್ರಕಟಿಸಿದರು.
ಆದಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.
ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ(ಎನ್‌ಎಬಿ) 2023ರ ಡಿಸೆಂಬರ್‌ನಲ್ಲಿ ಇಮ್ರಾನ್ ಖಾನ್ (72), ಬುಶ್ರಾ ಬೀಬಿ (50) ಮತ್ತು ಇತರ ಆರು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ದೇಶದ ಖಜಾನೆಗೆ ಇಮ್ರಾನ್ ಖಾನ್ ದಂಪತಿ 190 ಮಿಲಿಯನ್ ಪೌಂಡ್‌ಗಳಷ್ಟು (ಪಾಕಿಸ್ತಾನ ರೂಪಾಯಿಯಲ್ಲಿ 50 ಶತಕೋಟಿ) ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಒಬ್ಬ ಉದ್ಯಮಿ ಸೇರಿ ಪ್ರಕರಣದ ಇತರೆ ಆರೋಪಿಗಳು ದೇಶದಿಂದ ಹೊರಗಿರುವ ಕಾರಣ ಖಾನ್ ಮತ್ತು ಬೀಬಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ವ್ಯವಹಾರವೊಂದರ ಇತ್ಯರ್ಥದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ 50 ಶತಕೋಟಿ ರೂಪಾಯಿಯನ್ನು ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆಯು ಪಾಕಿಸ್ತಾನಕ್ಕೆ ಹಿಂದಿರುಗಿಸಿತ್ತು. ಆ ಹಣವನ್ನು ಇಮ್ರಾನ್ ಖಾನ್ ದಂಪತಿ, ಮತ್ತಿತರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪ.
ಆದರೆ, ರಾಷ್ಟ್ರೀಯ ಖಜಾನೆಗೆ ಸೇರಬೇಕಿದ್ದ ಈ ಹಣವನ್ನು ಬೀಬಿ ಮತ್ತು ಖಾನ್‌ಗೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಹಾಯ ಮಾಡಿದ ಉದ್ಯಮಿಯ ವೈಯಕ್ತಿಕ ಲಾಭಕ್ಕಾಗಿ ತಿರುಗಿಸಿದ್ದರು ಎಂದು ಆರೋಪಿಸಲಾಗಿದೆ.
ಬೀಬಿ, ಅಲ್-ಖಾದಿರ್ ಟ್ರಸ್ಟ್‌ನ ಟ್ರಸ್ಟಿಯಾಗಿ, ಝೀಲಂನಲ್ಲಿರುವ ಅಲ್-ಖಾದಿರ್ ವಿಶ್ವವಿದ್ಯಾಲಯಕ್ಕಾಗಿ 458 ಕನಾಲ್(57 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಈ ಭ್ರಷ್ಟಾಚಾರದಿಂದ ಹಲವು ಲಾಭ ಪಡೆದ ಆರೋಪವಿದೆ.