ಪತ್ತನಂತಿಟ್ಟ : ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 14 ಜನರನ್ನು ಪೊಲೀಸರು ಬಂಧಿಸಿದ್ದು ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಜಿಲ್ಲೆಯ ಎರಡು ಪೊಲೀಸ್ ಠಾಣೆಗಳಲ್ಲಿ ಒಂಬತ್ತು ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕೆಲವರನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದ್ದು, ಮತ್ತಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದಿದ್ದಾರೆ.
13 ವರ್ಷ ಆದಾಗಿನಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ. ಇದುವರೆಗೂ 62 ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ' ಎಂದು 18 ವರ್ಷದ ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕ್ರೀಡಾ ತರಬೇತುದಾರರು, ಸಹ ಕ್ರೀಡಾಪಟುಗಳು ಮತ್ತು ಸಹಪಾಠಿಗಳೇ ಆಕೆಯನ್ನು ಶೋಷಿಸಿರುವ ಪುರಾವೆಗಳು ಲಭಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಸೂಚಿಸಿರುವ ರಾಷ್ಟ್ರೀಯ ಮಹಿಳಾ ಆಯೋಗವು, ಮೂರು ದಿನದಲ್ಲಿ ಕ್ರಮಕೈಗೊಂಡ ವಿವರವಾದ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.
ಕೇರಳ ಮಹಿಳಾ ಆಯೋಗ ಸಹ ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದು, ತಕ್ಷಣವೇ ವರದಿ ನೀಡುವಂತೆ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಅವರು ಪತ್ತನಂತಿಟ್ಟ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.