ನಾಗ್ಪುರ: ಕಳೆದ 15 ವರ್ಷಗಳಿಂದ ಕನಿಷ್ಠ 50 ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ 45 ವರ್ಷದ ಮನಃಶಾಸ್ತ್ರಜ್ಞನನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೂರ್ವ ನಾಗ್ಪುರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹುಡ್ಕೇಶ್ವರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
'ಮನಃಶಾಸ್ತ್ರಜ್ಞ ವಿದ್ಯಾರ್ಥಿಗಳನ್ನು ವಿಶೇಷವಾಗಿ ಹುಡುಗಿಯರಿಗೆ ವೈಯಕ್ತಿಕ ಮತ್ತು ವೃತ್ತಿಪರ ಅಭಿವೃದ್ಧಿಯ ಆಮಿಷವೊಡ್ಡಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ. ಮನಶಾಸ್ತ್ರಜ್ಞ ನಡೆಸುತ್ತಿದ್ದ ಸಂಸ್ಥೆಯು ಆಯೋಜಿಸುತ್ತಿದ್ದ ಪ್ರವಾಸ ಮತ್ತು ಶಿಬಿರಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಲೈಂಗಿಕ ಕ್ರಿಯೆಯ ಫೋಟೊಗಳನ್ನು ತೆಗೆದು, ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಕಿರುಕುಳ ಅನುಭವಿಸಿದ ಹಳೆಯ ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ'ಎಂದೂ ಅವರು ಹೇಳಿದ್ದಾರೆ.
ಹಲವು ಸಂತ್ರಸ್ತರು ವಿವಾಹಿತರಾಗಿದ್ದಾರೆ. ಹಾಗಾಗಿ, ಪೊಲೀಸರಿಗೆ ದೂರು ನೀಡಲು ಹಿಂಜರಿಯಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ತನಿಖೆಗೆ ವಿಶೇಷ ಸಮಿತಿ ರಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.