ಸಂಭಲ್: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣಗಳ ಪತ್ತೆ ಕಾರ್ಯಾಚರಣೆ ಚುರುಕುಗೊಂಡಿದೆ. ಇದರ ಪರಿಣಾಮವಾಗಿ 16 ಮಸೀದಿ, 2 ಮದರಸಾ ಸೇರಿದಂತೆ 1,400ಕ್ಕೂ ಹೆಚ್ಚು ಜನರ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಭಲ್‌ನಲ್ಲಿ ವಿದ್ಯುತ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇದುವರೆಗೆ ₹11 ಕೋಟಿ ದಂಡ ವಿಧಿಸಲಾಗಿದ್ದು, ಸದ್ಯಕ್ಕೆ ₹20 ಲಕ್ಷ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಕಾರ್ಯಾಚರಣೆ ಆರಂಭವಾದ ಬಳಿಕ ಒಂದು ಚರ್ಚ್ ಸೇರಿದಂತೆ 22 ಮಸೀದಿಗಳು ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿಗಳನ್ನು ಸಲ್ಲಿಸಿವೆ. ರಾತ್ರಿ 10ರಿಂದ ಬೆಳಿಗ್ಗೆ 4ಗಂಟೆ ಸಮಯದಲ್ಲಿ ವಿದ್ಯುತ್ ವ್ಯಾಪಕವಾಗಿ ಬಳಕೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಿದಾಗಿ ವಿದ್ಯುತ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ರಾತ್ರಿ ವೇಳೆಯೂ ತಪಾಸಣೆ ನಡೆಸಬೇಕಾಯಿತು' ಎಂದು ಅವರು ವಿವರಿಸಿದ್ದಾರೆ.
ಈಚೆಗೆ ಸಮಾಜವಾದಿ ಪಕ್ಷದ ನಾಯಕರು ಆಗಿರುವ ಸಂಭಲ್‌ನ ಲೋಕಸಭಾ ಸಂಸದ ಜಿಯಾವುರ್ ರೆಹಮಾನ್ ನಿವಾಸದಲ್ಲಿ ಇಂಧನ ಇಲಾಖೆ ಅಧಿಕಾರಿಳು ತಪಾಸಣೆ ನಡೆಸಿದ್ದರು. ಜತೆಗೆ, ವಿದ್ಯುತ್ ಕಳ್ಳತನ ಆರೋಪದ ಮೇಲೆ ರೆಹಮಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
2024ರ ನವೆಂಬರ್‌ನಲ್ಲಿ ಸಂಭಲ್ ಜಿಲ್ಲೆಯ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.