ಅಮರಾವತಿ: ವಾಟ್ಸ್‌ಆಯಪ್ ಮೂಲಕ 161 ನಾಗರಿಕ ಸೇವೆಗಳನ್ನು ಒದಗಿಸುವ 'ಮನ ಮಿತ್ರ' ಯೋಜನೆಯನ್ನು ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರು ಗುರುವಾರ ಲೋಕಾರ್ಪಣೆಗೊಳಿಸಿದರು.
ಇದರಿಂದಾಗಿ ಜನರು ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪ್ರಮೇಯ ಎದುರಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ದತ್ತಿ, ಇಂಧನ, ಎಪಿಎಸ್‌ಆರ್‌ಟಿಸಿ, ಕಂದಾಯ, ಅಣ್ಣಾ ಕ್ಯಾಂಟೀನ್, ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಪೌರಾಡಳಿತ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳು ಸೇರಿದಂತೆ 161 ಸೇವೆಗಳನ್ನು ಮೊದಲ ಹಂತದಲ್ಲಿ ಒದಗಿಸಲಾಗುತ್ತದೆ.
ಎರಡನೇ ಹಂತದಲ್ಲಿ 360 ಸೇವೆಗಳನ್ನು ಒದಗಿಸಲಾಗುತ್ತದೆ. ಭವಿಷ್ಯದಲ್ಲಿ 520 ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಲೋಕೇಶ್ ಹೇಳಿದ್ದಾರೆ.