ಗುವಾಹಟಿ: ಮೈತೇಯಿ ಸಮುದಾಯದ ಜೊತೆಗಿನ ಸಂಘರ್ಷಕ್ಕೆ ಕೊನೆ ಹಾಡುವ ಉದ್ದೇಶದಿಂದ ಇದೇ 17ರಂದು ಕುಕಿ ಸಮುದಾಯ ಸದಸ್ಯರನ್ನು ಒಳಗೊಂಡ ನಿಯೋಗವೊಂದು ಗೃಹ ಸಚಿವಾಲಯ ಅಧಿಕಾರಿಗಳನ್ನು ಭೇಟಿ ಮಾಡಿ, ಚರ್ಚಿಸಲಿದೆ.
ಇದು, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿನ ಪ್ರಮುಖ ಬೆಳವಣಿಗೆ ಎಂದು ಬಣ್ಣಿಸಲಾಗುತ್ತಿದೆ.
ಕೌನ್ಸಿಲ್ ಸದಸ್ಯರು ಚುರಚಾಂದಪುರದಲ್ಲಿ ನೂತನ ರಾಜ್ಯಪಾಲ ಅಜಯಕುಮಾರ್ ಭಲ್ಲಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.
ಕುಕಿ ಜೊ ಸಮುದಾಯಗಳನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಗಳ ವೇದಿಕೆಯಾದ 'ಕುಕಿ ಜೊ ಕೌನ್ಸಿಲ್'ನ ನಿಯೋಗವು ನವದೆಹಲಿಯಲ್ಲಿ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ನಿಯೋಗದಲ್ಲಿ 8 ಸದಸ್ಯರಿರುವರು ಎಂದು ಕೌನ್ಸಿಲ್ ವಕ್ತಾರ ಗಿಂಜಾ ವುವಾಲ್‌ಜೊಂಗ್ 'ಪ್ರಜಾವಾಣಿ'ಗೆ ಭಾನುವಾರ ತಿಳಿಸಿದ್ದಾರೆ.
'ಕುಕಿ ಸಮುದಾಯಗಳಿರುವ ಪ್ರದೇಶಗಳನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶ ರಚಿಸಬೇಕು ಹಾಗೂ 'ಪ್ರತ್ಯೇಕ ಆಡಳಿತ' ವ್ಯವಸ್ಥೆ ರೂಪಿಸಬೇಕು' ಎಂಬ ಪ್ರಮುಖ ಬೇಡಿಕೆಯನ್ನು ಅಂದಿನ ಸಭೆಯಲ್ಲಿ ಮಂಡಿಸಲಾಗುವುದು' ಎಂದು ತಿಳಿಸಿದ್ದಾರೆ.
'ಕುಕಿ ನ್ಯಾಷನಲ್ ಆರ್ಗನೈಜೇಷನ್(ಕೆಎನ್‌ಒ) ಹಾಗೂ ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್)ನ ಬೇಡಿಕೆಗಳನ್ನು ಕೌನ್ಸಿಲ್ ಬೆಂಬಲಿಸುತ್ತದೆ. ಈ ಎರಡು ಸಂಘಟನೆಗಳೊಂದಿಗೆ ಶೀಘ್ರವೇ ಮಾತುಕತೆ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ' ಎಂದೂ ತಿಳಿಸಿದ್ದಾರೆ.
ಪ್ರಮುಖ ಅಂಶಗಳು
* 2023ರ ಮೇನಲ್ಲಿ ಸಂಘರ್ಷ ಶುರುವಾದಾಗಿನಿಂದ 250ಕ್ಕೂ ಹೆಚ್ಚು ಜನರ ಹತ್ಯೆ 60 ಸಾವಿರಕ್ಕೂ ಹೆಚ್ಚು ಜನರು ಸೂರು ಕಳೆದುಕೊಂಡಿದ್ದಾರೆ * 'ಪ್ರತ್ಯೇಕ ಆಡಳಿತ' ವ್ಯವಸ್ಥೆಗೆ ಕುಕಿ ಜೊ ಸಮುದಾಯದ ಬೇಡಿಕೆ * ಮಣಿಪುರದಲ್ಲಿ ಎನ್‌ಆರ್‌ಸಿ ಜಾರಿಗೆ ಮೈತೇಯಿಗಳ ಬೇಡಿಕೆ * ವಿಧಾನಸಭೆ ಕಲಾಪಗಳಿಂದ ಅಂತರ ಕಾಯ್ದುಕೊಂಡಿರುವ ಕುಕಿ ಸಮುದಾಯದ 10 ಶಾಸಕರು * ಮಣಿಪುರದ ಸಮಸ್ಯೆ 'ದೀರ್ಘಕಾಲಿನದು ಹಾಗೂ ಸೂಕ್ಷ್ಮ'ವಾಗಿರುವ ಕಾರಣ ಪರಿಹಾರಕ್ಕೆ ಸಮಯ ಬೇಕಾಗುತ್ತದೆ ಎಂದು ಕಳೆದ ವರ್ಷ ಡಿ.12ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿಕೆ