ವಾಷಿಂಗ್ಟನ್: ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಾದೇಶಿಕ ಪ್ರಯಾಣಿಕ ಜೆಟ್ ಮತ್ತು ಹೆಲಿಕಾಪ್ಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಕನಿಷ್ಠ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ಬುಧವಾರ ವರದಿ ಮಾಡಿದೆ.
64 ಜನರನ್ನು ಹೊತ್ತೊಯ್ಯುತ್ತಿದ್ದ ವಾಣಿಜ್ಯ ವಿಮಾನವೊಂದು ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ವಾಷಿಂಗ್ಟನ್ ನಗರದ ಹೊರವಲಯದ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪೊಟೊಮ್ಯಾಕ್ ನದಿಯಲ್ಲಿ ಪತನವಾಗಿದೆ.
ಹಲವು ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ. ಒಬ್ಬ ವ್ಯಕ್ತಿ ಮೃತಪಟ್ಟಾಗ ಅದು ದುರಂತ, ಆದರೆ, ಹಲವರು ಮೃತಪಟ್ಟಾಗ, ಅದು ಅಸಹನೀಯ ದುಃಖವಾಗಿದೆ ಎಂದು ಕಾನ್ಸಾಸ್‌ನ ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪತನಗೊಂಡಿರುವ ಅಮೆರಿಕ ಏರ್‌ಲೈನ್ಸ್ ವಿಮಾನವು ಬುಧವಾರ ಸಂಜೆ ಕಾನ್ಸಾಸ್‌ನ ವಿಚಿತಾದಿಂದ ಹೊರಟಿತ್ತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
ಸುಮಾರು 300 ಮಂದಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿದ್ದಾರೆ ಎಂದು ವಾಷಿಂಗ್ಟನ್‌ನ ಅಗ್ನಿಶಾಮಕ ಮತ್ತು ತುರ್ತು ವೈದ್ಯಕೀಯ ಸೇವೆಗಳ ವಿಭಾಗದ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ಹೇಳಿದ್ದಾರೆ.