ಜ್ವರ ಹಾಗೂ ಕೋವಿಡ್-19 ಸೋಂಕಿನ ಗುಣಲಕ್ಷಣದಂತೆಯೇ ಇರುವ ಈ ಹೊಸ ಮಾದರಿಯ ವೈರಾಣು ಎಲ್ಲಾ ವಯೋಮಾನದವರನ್ನೂ ಭಾದಿಸುವ ಲಕ್ಷಣ ಹೊಂದಿದೆ. ಆದಾಗ್ಯೂ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಸದ್ಯಕ್ಕೆ HMPVಗೆ ಯಾವುದೇ ಲಸಿಕೆ ಇಲ್ಲ.
ಈ ವೈರಾಣು 2001ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆದರೂ, ಇದು ಇದ್ದು ಸುಮಾರು 60 ವರ್ಷಗಳಾಗಿವೆ ಎಂದು ವೈರಾಣು ತಜ್ಞರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಚೀನಾದಲ್ಲಿನ ಈ ಕಳವಳಕಾರಿ ಬೆಳವಣಿಗೆಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಮುಂಜಾಗ್ರತೆ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ನ್ಯುಮೋನಿಯಾ ನಿರ್ವಹಣೆಗೆ ಪೈಲೆಟ್ ನಿರ್ವಹಣಾ ವ್ಯವಸ್ಥೆಯನ್ನು ಚೀನಾ ಜಾರಿಗೆ ತಂದಿದೆ.
ಚಳಿಗಾಲದಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಂಡುಬರುವುದರಿಂದ ಹಾಗೂ ಇದೇ ಸಂದರ್ಭದಲ್ಲಿ ಸೋಂಕು ಹರಡುವ ವೈರಾಣು ಪತ್ತೆಯಾಗಿರುವುದು ಇನ್ನಷ್ಟು ಆತಂಕ ಮೂಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಆದರೆ ಈವರೆಗೂ ಚೀನಾದ ಅಧಿಕಾರಿಗಳಾಗಲೀ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಾಗಲೀ ತುರ್ತು ಪರಿಸ್ಥಿತಿ ಘೋಷಿಸಿಲ್ಲ. ಆದರೆ ಚೀನಾದ ರೋಗ ನಿಯಂತ್ರಣ ಕೇಂದ್ರವು ಸೋಂಕು ಇರುವುದನ್ನು ಖಚಿತಪಡಿಸಿದ್ದು, ಇದು ಉತ್ತರ ಚೀನಾದಲ್ಲಿ ವ್ಯಾಪಿಸಿದೆ. ಪರಿಸ್ಥಿತಿ ಹದಗೆಟ್ಟಿದೆ ಎಂದಿದೆ. 14 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಭಾದಿಸಿದೆ ಎಂದೂ ಅದು ಹೇಳಿದೆ.
ಪ್ರಾಥಮಿಕವಾಗಿ ಮಕ್ಕಳು, ವಯಸ್ಸಾದವರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಈ ವೈರಾಣು ಭಾದಿಸಲಿದೆ. ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣ ಇದರದ್ದು. ಜತೆಗೆ ಮೂಗು ಕಟ್ಟುವುದು, ಉಸಿರಾಟದ ಸಮಸ್ಯೆ ಎದುರಾಗುವುದು ಪ್ರಮುಖ ಗುಣಲಕ್ಷಣಗಳು ಎಂದೆನ್ನಲಾಗಿದೆ.