ಇಸ್ಲಾಮಾಬಾದ್: 2023ರ ಮೇ 9ರಂದು ನಡೆದ ಸೇನಾ ನೆಲೆಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ 19 ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ಅಂಗೀಕರಿಸಿರುವುದಾಗಿ ಪಾಕಿಸ್ತಾನ ಸೇನೆ ಗುರುವಾರ ತಿಳಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಖಂಡಿಸಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯಕರ್ತರು ಫೈಸಲಾಬಾದ್‌ನ ಐಎಸ್‌ಐ ಕಟ್ಟಡ ಸೇರಿದಂತೆ ಹಲವು ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿದ್ದರು.
ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ರಾವಲ್ಪಿಂಡಿಯಲ್ಲಿರುವ ಸೇನೆಯ ಕೇಂದ್ರ ಕಚೇರಿ ಮುಂಭಾಗ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಸೇನಾ ಕಮಾಂಡರ್ ಮನೆಯನ್ನೂ ಧ್ವಂಸಗೊಳಿಸಿದ್ದರು.
ಪ್ರಕರಣ ಸಂಬಂಧ ದೇಶದಾದ್ಯಂತ ನೂರಾರು ಶಂಕಿತರನ್ನು ಬಂಧಿಸಲಾಗಿತ್ತು. 100ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆಗಾಗಿ ಮಿಲಿಟರಿ ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ಹಿಂಸಾಚಾರದಲ್ಲಿ ಭಾಗಿಯಾದ 85 ಮಂದಿಗೆ ಮಿಲಿಟರಿ ನ್ಯಾಯಾಲಯ ಡಿಸೆಂಬರ್‌ನಲ್ಲಿ, ಎರಡರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಅಪರಾಧಿಗಳು ಕ್ಷಮದಾನ ಕೋರಿ ಮೇಲ್ಮನವಿ ಸಲ್ಲಿಸಿದ್ದರು ಎಂದು ಸೇನೆಯು ಗುರುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
67 ಅಪರಾಧಿಗಳು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ 19 ಅಪರಾಧಿಗಳ ಅರ್ಜಿಗಳನ್ನು ಮಾನವೀಯ ಆಧಾರದ ಮೇಲೆ ಸ್ವೀಕರಿಸಲಾಗಿದೆ. ಉಳಿದ ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ಕಾನೂನು ಪ್ರಕ್ರಿಯೆಯ ಬಳಿಕ ತೀರ್ಮಾನಿಸಲಾಗುವುದು ಎಂದೂ ಸೇನೆ ತಿಳಿಸಿದೆ.