ನವದಹಲಿ: ರೈಲ್ವೆ ಇಲಾಖೆಯ ಆಧುನೀಕರಣಕ್ಕಾಗಿ ಭಾರತೀಯ ರೈಲ್ವೆಯು ₹1.92 ಲಕ್ಷ ಕೋಟಿಯನ್ನು 2024-25ನೇ ಸಾಲಿನಲ್ಲಿ ಖರ್ಚು ಮಾಡಿದೆ. ಇದರಲ್ಲಿ ಯೋಜನೆಗಳ ಸಾಮರ್ಥ್ಯ ವಿಸ್ತರಣೆ, ವೇಗ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ.
ಹೊಸ ಮಾರ್ಗಗಳ ಆರಂಭ, 2030ರೊಳಗೆ ಶೂನ್ಯ ಇಂಗಾಲ ಗುರಿಯನ್ನು ತಲುಪಲು ಮಾರ್ಗಗಳ ವಿದ್ಯುದೀಕರಣದಂತ ಯೋಜನೆಗಳು ಇದರಲ್ಲಿ ಸೇರಿವೆ.
ರೈಲ್ವೆಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹2.65 ಲಕ್ಷ ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಆದರಲ್ಲಿ ಈವರೆಗೂ ₹1.92 ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ಸುರಕ್ಷತೆಗಾಗಿ ₹34.41 ಸಾವಿರ ಕೋಟಿ ಹಾಗೂ ₹40.36 ಸಾವಿರ ಕೋಟಿಯನ್ನು ರೋಲಿಂಗ್ ಸ್ಟಾಕ್‌ಗೆ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
2025-26ನೇ ಸಾಲಿನ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿಯಲ್ಲಿ ಮಂಡಿಸಲಿದ್ದು, ರೈಲ್ವೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದೆನ್ನಲಾಗಿದೆ. ಭಾರತೀಯ ರೈಲ್ವೆ ಒಟ್ಟು 68 ಸಾವಿರ ಕಿ.ಮೀ. ಸಂಪರ್ಕ ಜಾಲ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆಯಿಂದ ₹2.8 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಯೋಜನೆ ಹೊಂದಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 8ರಷ್ಟು ಹೆಚ್ಚಳವಾಗಿದೆ. ಮತ್ತೊಂದೆಡೆ, ನಿರ್ವಹಣಾ ವೆಚ್ಚವಾಗಿ ₹2.76 ಲಕ್ಷ ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಿದೆ.
'ಮೂಲ ಬಂಡವಾಳವು ಕಳೆದ ಒಂದು ದಶಕದಲ್ಲೇ ಅತ್ಯಧಿಕವಾಗಿದೆ. ಇದರಲ್ಲಿ 136 ವಂದೇ ಭಾರತ್ ರೈಲುಗಳ ಅನುಷ್ಠಾನವೂ ಒಳಗೊಂಡಿದೆ. ಜತೆಗೆ ರೈಲು ಮಾರ್ಗಗಳಲ್ಲಿ ಶೇ 97ರಷ್ಟು ವಿದ್ಯುದೀಕರಣ, ಬ್ರಾಡ್‌ಗೇಜ್ ಮಾರ್ಗಗಳ ನಿರ್ಮಾಣ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು, ಹೊಸ ಮಾರ್ಗ, ಟ್ರ್ಯಾಕ್ ಡಬಲಿಂಗ್‌ಗಳೂ ಒಳಗೊಂಡಿವೆ' ಎಂದೆನ್ನಲಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲು ಸದ್ಯ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ವೇಗ ಹಾಗೂ ಸುರಕ್ಷತೆಯ ಪರೀಕ್ಷೆ ನಡೆಸಿ ಪ್ರಮಾಣಪತ್ರ ಪಡೆಯಲಿದೆ. ಇದೇ ವರ್ಷ ಈ ರೈಲು ಕಾರ್ಯಾರಂಭ ಮಾಡಲಿದ್ದು, ದೂರದ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದೆನ್ನಲಾಗಿದೆ.
ಭಾರತೀಯ ರೈಲ್ವೆಯು ನಿತ್ಯ 2.3 ಕೋಟಿ ಜನರನ್ನು ಹೊತ್ತು ಸಾಗುತ್ತಿದೆ. ರಸ್ತೆಗಳ ಅಭಿವೃದ್ಧಿ, ನಾಗರಿಕ ವಿಮಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಮತ್ತು ತ್ವರಿತವಾಗಿ ತಲುಪದ ಹಾಗೂ ಹೆಚ್ಚು ಜನಸಂದಣಿಯಿಂದಾಗಿ ರೈಲು ಆಯ್ದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ.