ನಾಗ್ಪುರ: ಭಾರತ ಸಂವಿಧಾನದ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಅವರು 85 ವರ್ಷಗಳ ಹಿಂದೆಯೇ ಮಹಾರಾಷ್ಟ್ರದ ಆರ್.ಎಸ್.ಎಸ್. ಶಾಖೆಯೊಂದಕ್ಕೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿದೆ.
ಸೈದ್ಧಾಂತಿಕ ಭಿನ್ನತೆಯ ಹೊರತಾಗಿಯೂ ಅಂಬೇಡ್ಕರ್ ಅವರು ಆತ್ಮೀಯ ಭಾವನೆಯಿಂದ ನೋಡುತ್ತಿದ್ದರು ಎಂದು ಅದು ಹೇಳಿದೆ.
ಆರ್.ಎಸ್.ಎಸ್‌ನ ಸಂವಹನ ವಿಭಾಗ 'ವಿಶ್ವ ಸಂವಾದ ಕೇಂದ್ರ'ದ ವಿದರ್ಭ ಪ್ರಾಂತ್ಯ ಗುರುವಾರ ಹೊರಡಿಸಿದ ಟಿಪ್ಪಣಿಯಲ್ಲಿ ಇದನ್ನು ಉಲ್ಲೇಖಿಸಿದೆ. 1940 ಜನವರಿ 2ರಂದು ಸತಾರಾ ಜಿಲ್ಲೆಯ ಕರಾಡ್‌ನಲ್ಲಿರುವ ಸಂಘದ ಶಾಖೆಗೆ ಭೇಟಿ ನೀಡಿ, ಸ್ವಯಂ ಸೇವಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ನಾನು ಆರ್.ಎಸ್.ಎಸ್ ಅನ್ನು ಆತ್ಮೀಯ ಭಾವನೆಯಿಂದ ಕಾಣುತ್ತೇನೆ' ಎಂದು ಅಂಬೇಡ್ಕರ್ ಅವರು ಭಾಷಣದಲ್ಲಿ ಹೇಳಿದ್ದರು ಎಂದು ಟಿಪ್ಪಣಿಯಲ್ಲಿ ಉಲ್ಲೇಖ ಇದೆ.
1940 ಜನವರಿ 9ರ ಪುಣೆ ಮೂಲದ ಮರಾಠಿ ದಿನ ಪತ್ರಿಕೆ 'ಕೇಸರಿ', ಅಂಬೇಡ್ಕರ್ ಅವರ ಶಾಖೆ ಭೇಟಿಯ ಬಗ್ಗೆ ವರದಿ ಮಾಡಿತ್ತು ಎಂದು ಟಿಪ್ಪಣಿ ಹೇಳಿದೆ. ಅಲ್ಲದೆ ಪತ್ರಿಕೆಯ ವರದಿಯ ತುಣುಕನ್ನೂ ಲಗತ್ತಿಸಲಾಗಿದೆ.