ಬೀಜಿಂಗ್: ದಕ್ಷಿಣ ಟಿಬೆಟ್‌ನಲ್ಲಿ ಇದೇ ವಾರ ಸಂಭವಿಸಿದ ಭೂಕಂಪದ ಕೇಂದ್ರ ಬಿಂದುವಾಗಿರುವ ಲ್ಹಾಸ ಬ್ಲಾಕ್‌ನಲ್ಲಿ ಕಳೆದ 75 ವರ್ಷಗಳಲ್ಲಿ 6.0 ಗಿಂತ ಹೆಚ್ಚು ತೀವ್ರತೆಯಲ್ಲಿ 20 ಸಲ ಭೂಕಂಪವಾಗಿದೆ.
ಲ್ಹಾಸ ಬ್ಲಾಕ್‌ನಲ್ಲಿರುವ ಟಿಬೆಟ್ ಸ್ವಾಯತ್ತ ಪ್ರದೇಶ ಕ್ಸಿಗಾಸೆಯ ಡಿಂಗ್ರಿ ಕೌಂಟಿಯಲ್ಲಿ 6.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು.
ಸ್ಥಳೀಯ ಆಡಳಿತಗಳು ನೀಡಿರುವ ಮಾಹಿತಿ ಪ್ರಕಾರ, ದುರಂತದಿಂದಾಗಿ ಬರೋಬ್ಬರಿ 126 ಮಂದಿ ಮೃತಪಟ್ಟು, 188 ಜನರು ಗಾಯಗೊಂಡಿದ್ದಾರೆ.
ಶಿಗಾಸ್ಟೆ ಎಂಬ ಹೆಸರಿನಿಂದಲೂ ಕರೆಯುವ ಕ್ಸಿಗಾಸೆಯು ಭಾರತದ ಗಡಿಗೆ ಹತ್ತಿರದಲ್ಲಿದೆ. ಟಿಬೆಟ್‌ನ ಪವಿತ್ರ ಸ್ಥಳಗಳಲ್ಲಿ ಇದೂ ಒಂದಾಗಿದೆ. ಡಿಂಗ್ರಿ ಕೌಂಟಿಯ ತ್ಸೊಗೊ ಟೌನ್‌ಶಿಪ್ ಭೂಕಂಪದ ಕೇಂದ್ರ ಬಿಂದುವಾಗಿದ್ದು, ಈ ಪ್ರದೇಶದ 20 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 6,900 ಮಂದಿ ವಾಸಿಸುತ್ತಿದ್ದಾರೆ. 27 ಗ್ರಾಮಗಳು ಇಲ್ಲಿವೆ. ಡಿಂಗ್ರಿ ಕೌಂಟಿಯ ಒಟ್ಟು ಜನಸಂಖ್ಯೆ 61 ಸಾವಿರ ಎಂದು ಅಧಿಕೃತ ಅಂಕಿ-ಅಂಶ ತಿಳಿಸುತ್ತದೆ.
ಕಂಪನ ಕೇಂದ್ರವು 10 ಕಿ.ಮೀ ಆಳದಲ್ಲಿ ಇತ್ತು ಎಂದು ಚೀನಾದ ಭೂಕಂಪ ಮಾಪನ ಕೇಂದ್ರ (ಸಿಇಎನ್‌ಸಿ) ತಿಳಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
'ಹಿಂದೂ ಮಹಾಸಾಗರದ ಉತ್ತರ ಭಾಗದ ಪದರಗಳಲ್ಲಿನ ಒತ್ತಡ ಹಾಗೂ ಟೆಕ್ಟೊನಿಕ್ ಪದರಗಳ ಚಲನೆಯಿಂದಾಗಿ ಮಂಗಳವಾರ ಭೂಕಂಪ ಸಂಭವಿಸಿದೆ' ಎಂದು ಸಿಇಎನ್‌ಸಿ ತಿಳಿಸಿದೆ.
'1950ರಿಂದ ಈಚೆಗೆ ಬರೋಬ್ಬರಿ 21 ಬಾರಿ 6ಕ್ಕಿಂತ ಹೆಚ್ಚು ಮತ್ತು ಗರಿಷ್ಠ 6.9 ತೀವ್ರತೆ ವರೆಗಿನ ಭೂಕಂಪ ಸಂಭವಿಸಿದೆ' ಎಂದು ಮಾಹಿತಿ ನೀಡಿದೆ.
ಹಿಂದೂ ಮಹಾಸಾಗರದ ಪದರಗಳು ಯುರೇಷಿಯನ್ ಪದರಗಳೊಂದಿಗಿನ ಘರ್ಷಣೆಯ ಪರಿಣಾಮ, ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿನ ಭೂ ಪದರಗಳಲ್ಲಿನ ಒತ್ತಡ ಸೃಷ್ಟಿಯಾಗುತ್ತಿದೆ. ಈ ಡಿಕ್ಕಿಯೇ ಹಿಮಾಲಯ ರಚನೆಗೆ ಕಾರಣವಾಗಿವೆ ಎಂದೂ ಹೇಳಿದೆ.