ನವದೆಹಲಿ: ಕೋವಿಡ್-19 ಪಿಡುಗಿನ ವೇಳೆ, ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಗೊಂಡಿತ್ತು. ನಂತರದ ವರ್ಷಗಳಲ್ಲಿ ದಾಖಲಾತಿಯಲ್ಲಿ ಕ್ರಮೇಣ ಇಳಿಕೆ ಕಂಡುಬಂದಿದೆ. 6-14 ವರ್ಷ ವಯೋಮಾನದ ಮಕ್ಕಳ ದಾಖಲಾತಿ ಪ್ರಮಾಣವು 2018ರಲ್ಲಿ ಇದ್ದ ಮಟ್ಟಕ್ಕೆ ತಲುಪಿದೆ.
ಮಂಗಳವಾರ ಬಿಡುಗಡೆಯಾಗಿರುವ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ(ಎಎಸ್‌ಇಆರ್)ಯಲ್ಲಿ ಈ ಅಂಶ ಹೇಳಲಾಗಿದೆ.
ಕೋವಿಡ್-19 ಪಿಡುಗಿನ ವೇಳೆ ಮಕ್ಕಳು ಕಲಿಕಾ ನಷ್ಟ ಎದುರಿಸಿದ್ದರು. ತದನಂತರ, ಪರಿಹಾತ್ಮಕ ಬೋಧನೆ ಸೇರಿದಂತೆ ಹಲವು ಕ್ರಮಗಳ ಫಲವಾಗಿ, ಮಕ್ಕಳ ಕಲಿಕೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಪ್ರಾಥಮಿಕ ಹಂತದ ಕಲಿಕಾ ಮಟ್ಟವು, ಈ ಹಿಂದಿನ ವರ್ಷಗಳಲ್ಲಿ ಇದ್ದ ಮಟ್ಟಕ್ಕಿಂತಲೂ ಉತ್ತಮಗೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
'ಪ್ರಥಮ' ಎಂಬ ಎನ್‌ಜಿಒ ಈ ಸಮೀಕ್ಷೆ ನಡೆಸಿದೆ.
ವರದಿಯಲ್ಲಿನ ಪ್ರಮುಖ ಅಂಶಗಳು
ಸ್ಮಾರ್ಟ್‌ಫೋನ್ ಬಳಕೆ 14-16 ವರ್ಷ ವಯೋಮಾನದ ಮಕ್ಕಳ ಪೈಕಿ ಶೇ 82ರಷ್ಟು ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಗೊತ್ತಿದೆ. ಸಮೀಕ್ಷೆ ನಡೆದಿದ್ದ ಹಿಂದಿನ ವಾರದ ಅವಧಿಯಲ್ಲಿ ಶೇ 57ರಷ್ಟು ಮಕ್ಕಳು ಸ್ಮಾರ್ಟ್‌ಫೋನ್‌ಅನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿದ್ದರೆ ಸಾಮಾಜಿಕ ಜಾಲತಾಣ ವೀಕ್ಷಣೆಗೆ ಬಳಸಿದ್ದಾಗಿ ಶೇ 76ರಷ್ಟು ಮಕ್ಕಳು ಹೇಳಿದ್ದಾರೆ
ದಾಖಲಾತಿಯಲ್ಲಿ ಏರಿಳಿತ 2006ರಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ 18.7ರಷ್ಟಿತ್ತು. ಇದು 2014ರಲ್ಲಿ ಶೇ 30.8ಕ್ಕೆ ಏರಿಕೆಯಾಗಿತ್ತಲ್ಲದೇ 2018ರಲ್ಲಿಯೂ ಇಷ್ಟೇ ಪ್ರಮಾಣದಲ್ಲಿ ಇತ್ತು. ಕೋವಿಡ್-19 ಪಿಡುಗು ಕಾಣಿಸಿಕೊಂಡ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂತು. 2018ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ 65.6ರಷ್ಟಿದ್ದದ್ದು 2022ರಲ್ಲಿ 72.9ಕ್ಕೆ ಏರಿತು. ಆದರೆ ನಂತರದ ವರ್ಷಗಳಲ್ಲಿ ದಾಖಲಾತಿ ಪ್ರಮಾಣ ಕುಸಿದಿದ್ದು 2024ರಲ್ಲಿ ಇದು ಶೇ 66.8ಕ್ಕೆ ಇಳಿದಿತ್ತು. ದಾಖಲಾತಿ ಪ್ರಮಾಣವು 2018ರಲ್ಲಿ ಇದ್ದ ಮಟ್ಟಕ್ಕೆ ಸಂಪೂರ್ಣವಾಗಿ ಮರಳಿದೆ. ಬೇರೆ ಬೇರೆ ಕ್ಷೇತ್ರಗಳ ಆರ್ಥಿಕತೆಯೂ ಮತ್ತೆ ಹಳಿಗೆ ಬಂದಿರುವುದನ್ನು ನೋಡಿದಾಗ ಶೈಕ್ಷಣಿಕ ರಂಗದಲ್ಲಿನ ಈ ಬದಲಾವಣೆ ಅಚ್ಚರಿ ಮೂಡಿಸುವುದಿಲ್ಲ
ಓದುವ ಸಾಮರ್ಥ್ಯ ರಾಷ್ಟ್ರ ಮಟ್ಟಕ್ಕೆ ಸಂಬಂಧಿಸಿದಂತೆ 2014ರಲ್ಲಿ 3ನೇ ತರಗತಿ ಮಕ್ಕಳ ಪೈಕಿ ಓದುವ ಸಾಮರ್ಥ್ಯ ಹೊಂದಿದ್ದವರ ಸಂಖ್ಯೆ ಶೇ 23.6ರಷ್ಟಿತ್ತು. ಈ ಪ್ರಮಾಣ 2018ರಲ್ಲಿ ಶೇ 27.3ಕ್ಕೆ ಹೆಚ್ಚಳವಾಯಿತು. ಓದುವ ಸಾಮರ್ಥ್ಯ ಹೊಂದಿದ್ದ ಮಕ್ಕಳ ಸಂಖ್ಯೆ 2022ರಲ್ಲಿ ಶೇ 20.5ಕ್ಕೆ ಕುಸಿದಿತ್ತು. ಈಗ 3ನೇ ತರಗತಿ ಮಕ್ಕಳಲ್ಲಿ ಓದುವ ಸಾಮರ್ಥ್ಯದಲ್ಲಿ ಮತ್ತೆ ಸುಧಾರಣೆ ಕಂಡುಬಂದಿದ್ದು ಶೇ 27.1ರಷ್ಟು ಮಕ್ಕಳು ನಿರರ್ಗಳವಾಗಿ ಓದಬಲ್ಲವರಾಗಿದ್ದಾರೆ
ಕೆಲ ರಾಜ್ಯಗಳಿಂದ ಉತ್ತಮ ಸಾಧನೆ ಬೋಧನೆ- ಕಲಿಕೆ ಪ್ರಕ್ರಿಯೆಯಲ್ಲಿ ಕೆಲ ರಾಜ್ಯಗಳು ಉತ್ತಮ ಸಾಧನೆ ದಾಖಲಿಸಿವೆ. ಕೆಲ ರಾಜ್ಯಗಳು ಕೋವಿಡ್-19 ಪಿಡುಗಿಗೂ ಮುನ್ನ ಇದ್ದ ಕಲಿಕಾ ಮಟ್ಟಕ್ಕಿಂತಲೂ ಹೆಚ್ಚಿನ ಸುಧಾರಣೆ ದಾಖಲಿಸಿದ್ದರೆ ಇನ್ನೂ ಕೆಲ ರಾಜ್ಯಗಳಲ್ಲಿ ಸುಧಾರಣೆ ಕಂಡುಬರಬೇಕಿದೆ. ಉತ್ತರ ಪ್ರದೇಶ ಬಿಹಾರ ಮಧ್ಯಪ್ರದೇಶ ಹಾಗೂ ತಮಿಳುನಾಡಿನಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
1ನೇ ತರಗತಿಯಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳ ಸಂಖ್ಯೆ ಇಳಿಕೆ ರಾಷ್ಟ್ರ ಮಟ್ಟದಲ್ಲಿ 1ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಪೈಕಿ 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡುಬಂದಿದೆ. 2018ರಲ್ಲಿ ಇಂತಹ ಮಕ್ಕಳ ಪ್ರಮಾಣ ಶೇ 25.6ರಷ್ಟು ಇತ್ತು. 2022ರಲ್ಲಿ ಶೇ 22.7ಕ್ಕೆ ಕುಸಿಯಿತು. 2024ರ ವೇಳೆಗೆ ಈ ಪ್ರಮಾಣ ಶೇ 16.7ರಷ್ಟು ಇತ್ತು.
649491 - ಸಮೀಕ್ಷೆಯ ಭಾಗವಾಗಿದ್ದ ಗ್ರಾಮೀಣ ಭಾಗದ ಮಕ್ಕಳ ಸಂಖ್ಯೆ
17997 - ಸಮೀಕ್ಷೆ ನಡೆಸಲಾದ ಗ್ರಾಮಗಳ ಸಂಖ್ಯೆ
605 - ಸಮೀಕ್ಷೆ ಕೈಗೊಂಡಿದ್ದ ಜಿಲ್ಲೆಗಳ ಸಂಖ್ಯೆ.