ನವದೆಹಲಿ: 'ಕೌಶಲಯುಳ್ಳ ಉದ್ಯೋಗಿಗಳನ್ನು ಹೊಂದುವುದು ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯದಲ್ಲಿ ಪ್ರಮುಖ ಭಾಗವಾಗಿದ್ದು, ಉಭಯ ರಾಷ್ಟ್ರಗಳ ಹಿತದೃಷ್ಟಿಯಿಂದ ಲಾಭದಾಯಕವಾಗಿದೆ' ಎಂದು ಭಾರತ ತಿಳಿಸಿದೆ.
'ವೀಸಾ ನೀಡಿಕೆ ವಿಚಾರದಲ್ಲಿ ವ್ಯಾಪಕ ಸುಧಾರಣೆಗಳ ಅಗತ್ಯವಿದೆ' ಎಂದು ಶತಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ತಿಳಿಸಿದ್ದರು.
ಈ ಕುರಿತಂತೆ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಭಾರತದಿಂದ ಈ ಹೇಳಿಕೆ ಹೊರಬಿದ್ದಿದೆ.
ಭಾರತವು ದೊಡ್ಡ ಸಂಖ್ಯೆಯಲ್ಲಿ ಐ.ಟಿ ಕೌಶಲಯುತ ಉದ್ಯೋಗಿಗಳನ್ನು ಹೊಂದಿದ್ದು, ಇಡೀ ವಿಶ್ವದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಎಚ್-1ಬಿ ವೀಸಾ ಪಡೆದವರಲ್ಲಿ ಭಾರತದ ಐ.ಟಿ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
'ಉಭಯ ದೇಶಗಳು ಅತ್ಯಂತ ಶಕ್ತಿಯುತವಾದ ಆರ್ಥಿಕ ಶಕ್ತಿಯಾಗಿ ಬೆಳೆಯಲು ಹಾಗೂ ತಾಂತ್ರಿಕ ಸಹಭಾಗಿತ್ವ ಹೊಂದಲು ಕೌಶಲಯುಕ್ತ ಉದ್ಯೋಗಿಗಳೇ ಪ್ರಮುಖ ಕಾರಣಕರ್ತರಾಗಿದ್ದಾರೆ' ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ರಣ್‌ದೀರ್ ಜೈಸ್ವಾಲ್ ತಿಳಿಸಿದರು.
'ಕೌಶಲಯುಕ್ತ ಉದ್ಯೋಗಿಗಳು ನೀಡುವ ತಾಂತ್ರಿಕ ನೆರವಿನಿಂದ ಭಾರತ ಹಾಗೂ ಅಮೆರಿಕದ ಆರ್ಥಿಕತೆಗೆ ಸಾಕಷ್ಟು ನೆರವಾಗಿದೆ. ಪರಸ್ಪರ ಲಾಭದ ದೃಷ್ಟಿಯಿಂದ ಉಭಯ ರಾಷ್ಟ್ರಗಳು ಮುಂದಿನ ಹೆಜ್ಜೆ ಇಡಲಾಗುವುದು' ಎಂದು ತಿಳಿಸಿದರು.
2023ರ ಸೆ.30ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಅಮೆರಿಕ ಸರ್ಕಾರ ನೀಡಿದ 2,65,777 ಎಚ್-1ಬಿ ವೀಸಾಗಳ ಪೈಕಿ ಶೇ 78ರಷ್ಟು ಭಾರತೀಯರೇ ಪಡೆದುಕೊಂಡಿದ್ದರು.