ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಎರಡು ಶಂಕಿತ ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರಿಗೂ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಇಬ್ಬರ ಪ್ರಯೋಗಾಲಯ ಮಾದರಿ ಸಂಗ್ರಹಿಸಲಾಗಿದ್ದು, ಏಮ್ಸ್ ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ(ಎನ್‌ಐವಿ) ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
'ನಾಗ್ಪುರದಲ್ಲಿ ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಧ್ಯಮಗಳ ವರದಿ ತಪ್ಪಾಗಿದೆ. 7 ಮತ್ತು 14 ವರ್ಷದ ಇಬ್ಬರು ಮಕ್ಕಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ. ಅವರ ಪ್ರಯೋಗಾಲಯ ಮಾದರಿಯನ್ನು ಇಲ್ಲಿ ಪರೀಕ್ಷೆ ನಡೆಸಿ ಶಂಕಿತ ಎಚ್‌ಎಂಪಿವಿ ಪ್ರಕರಣ ಎಂದು ಗುರುತಿಸಲಾಗಿದೆ'ಎಂದು ಜಿಲ್ಲಾಧಿಕಾರಿ ವಿಪಿನ್ ಇಟಾಂಕರ್ ಹೇಳಿದ್ದಾರೆ.
ಸದ್ಯ, ಪ್ರಯೋಗಾಲಯ ಮಾದರಿಗಳನ್ನು ನಾಗ್ಪುರದ ಏಮ್ಸ್ ಮತ್ತು ಪುಣೆಯ ಎನ್‌ಐವಿಗೆ ರವಾನಿಸಲಾಗಿದೆ. ಮಕ್ಕಳ ಆರೋಗ್ಯ ಉತ್ತಮವಾಗಿದೆ ಎಂದಿದ್ದಾರೆ.
ಸದ್ಯಕ್ಕೆ ನಾಗ್ಪುರದಲ್ಲಿ ಎಚ್‌ಎಂಪಿವಿ ದೃಢಪಡದ ಹಿನ್ನೆಲೆಯಲ್ಲಿ ಆತಂಕದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಎಚ್‌ಎಂಪಿವಿ ಉಸಿರಾಟ ಸಂಬಂಧಿತ ರೋಗಕಾರಕ ವೈರಸ್ ಆಗಿದ್ದು, ಎಲ್ಲ ವಯೋಮಾನದವರಲ್ಲಿ ಚಳಿಗಾಲ ಮತ್ತು ವಸಂತ ಕಾಲದ ಆರಂಭದಲ್ಲಿ ಕಾಣಿಸಿಕೊಳ್ಳುತ್ತದೆ. ಬಹಳ ಪ್ರಕರಣಗಳಲ್ಲಿ ರೋಗಲಕ್ಷಣಗಳು ಸೌಮ್ಯವಾಗಿರಲಿದ್ದು, ಮನೆಯಲ್ಲೇ ಸ್ವಯಂ ಕಾಳಜಿ ಮೂಲಕ ಗುಣಮುಖರಾಗಬಹುದು.
ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಒಟ್ಟಾರೆ 5 ಪ್ರಕರಣಗಳು ದೃಢಪಟ್ಟಿವೆ.