ಭುವನೇಶ್ವರ: ಒಡಿಶಾದ ಅರಣ್ಯದಿಂದ ಡಿಸೆಂಬರ್ 8ರಂದು ನಾಪತ್ತೆಯಾಗಿ, 200 ಕಿಲೋ ಮೀಟರ್‌ಗೂ ಅಧಿಕ ದೂರ ಸಂಚರಿಸಿ, ಕೊನೆಗೆ ಪಶ್ಚಿಮ ಬಂಗಾಳದಲ್ಲಿ ಸೆರೆ ಸಿಕ್ಕಿದ್ದ ಜೀನತ್ ಎಂಬ ಹೆಣ್ಣು ಹುಲಿ ಜನವರಿ 1 ರಂದು ವಾಪಸ್ ಸುರಕ್ಷಿತವಾಗಿ ಒಡಿಶಾದ ಸಿಂಪ್ಲಿಪಾಲ್ ಟೈಗರ್ ರಿಸರ್ವ್‌ಗೆ ಬಂದು ಸೇರಿದೆ.
ಮಯೂರ್‌ಗಂಜ್ ಜಿಲ್ಲೆಯಲ್ಲಿರುವ ಸಿಂಪ್ಲಿಪಾಲ್ ಟೈಗರ್ ರಿಸರ್ವ್‌ನಿಂದ ತಪ್ಪಿಸಿಕೊಂಡಿದ್ದ ಮೂರು ವರ್ಷದ ಚಂಚಲೆ ಜೀನತ್, ಜಾರ್ಖಂಡ್ ಪ್ರವೇಶಿಸಿ ಅಲ್ಲಿನ ಅರಣ್ಯ, ಅರಣ್ಯದಂಚಿನ ಗ್ರಾಮಗಳನ್ನು ಹಾದು ಪಶ್ಚಿಮ ಬಂಗಾಳಕ್ಕೆ ಹೋಗಿದ್ದಳು.
ಹಿಡಿಯುವುದಕ್ಕಾಗಿ ಹಿಂದೆ ಬಿದ್ದಿದ್ದ ಅರಣ್ಯ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಕ್ಷಣಾರ್ಧದಲ್ಲಿ ನಾಪತ್ತೆಯಾಗುತ್ತಿದ್ದಳು.
ಡಿಸೆಂಬರ್ 29 ರಂದು ಪಶ್ಚಿಮ ಬಂಗಾಳದ ಭಂಕುರಾ ಅರಣ್ಯ ಪ್ರವೇಶಿಸಿ ನಿತ್ರಾಣವಾಗಿದ್ದ ಜೀನತ್, ಕಡೆಗೂ ಅರಣ್ಯ ಇಲಾಖೆ ಬಲೆಗೆ ಬಿದ್ದಿದ್ದಳು. ತಕ್ಷಣವೇ ಅಧಿಕಾರಿಗಳು, ಜೀನತ್‌ಳನ್ನು ಆಲಿಪುರ್ ಮೃಗಾಲಯಕ್ಕೆ ಸಾಗಿಸಿ ಚಿಕಿತ್ಸೆ ನೀಡಿದ್ದರು.
ನಾಲ್ಕು ದಿನಗಳ ಚಿಕಿತ್ಸೆ ಮತ್ತು ಸೂಕ್ತ ಆಹಾರ ಕೊಟ್ಟಿದ್ದರಿಂದ ಚೇತರಿಸಿಕೊಂಡಿರುವ ಜೀನತ್ ಇಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳ ನಿಗಾದಲ್ಲಿ ಗ್ರೀನ್ ಕಾರಿಡಾರ್ ಮೂಲಕ ಸಿಂಪ್ಲಿಪಾಲ್ ಟೈಗರ್ ರಿಸರ್ವ್‌ಗೆ ಬಂದು ಸೇರಿದೆ.
'ಜೀನತ್, ತಜ್ಞರ ನಿಗಾದಲ್ಲಿ ಕೆಲ ದಿನ ಇರಲಿದ್ದಾಳೆ. ಅವಳ ವರ್ತನೆಗಳನ್ನು ನೋಡಿಕೊಂಡು ಅರಣ್ಯಕ್ಕೆ ಬಿಡುವ ಬಗ್ಗೆ ನಿರ್ಧರಿಸಲಾಗುವುದು' ಎಂದು ಒಡಿಶಾ ಸಿಸಿಎಫ್ ಪಿ.ಕೆ. ಝಾ ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಜೀನತ್‌ಳನ್ನು ಸಂತಾನ ವೃದ್ಧಿಗಾಗಿ ಮಹಾರಾಷ್ಟ್ರದ ತಡೋಬಾ ಟೈಗರ್ ರಿಸರ್ವ್‌ನಿಂದ ಒಡಿಶಾದ ಸಿಂಪ್ಲಿಪಾಲ್ ಅರಣ್ಯಕ್ಕೆ ಕಳುಹಿಸಿ ಕೊಡಲಾಗಿತ್ತು.
ಸಾಮಾನ್ಯವಾಗಿ ಹುಲಿಗಳು ತಮ್ಮ ಆವಾಸ ಸ್ಥಾನದಿಂದ 12 ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಗರಿಷ್ಠ ಸಂಚರಿಸುತ್ತವೆ. ಆದರೆ, ಜೀನತ್ ಹುಲಿ ಬರೋಬ್ಬರಿ 200 ಕಿ.ಮೀ ಗೂ ಅಧಿಕ ದೂರ ಮೂರು ರಾಜ್ಯಗಳನ್ನು ಸುತ್ತಿ ಬಂದಿರುವುದು ತಜ್ಞರಿಗೆ ಅಚ್ಚರಿ ತರಿಸಿದೆ.