ಮುಂಬೈ: ನಾಂದೇಡ್‌ನಲ್ಲಿ 2006ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ, ಬದುಕಿ ಉಳಿದಿದ್ದ ಎಲ್ಲ 9 ಆರೋಪಿಗಳನ್ನು ಸ್ಥಳೀಯ ಸೆಷನ್ಸ್ ಕೋರ್ಟ್ ಆರೋಪಮುಕ್ತಗೊಳಿಸಿದೆ.
ಆದೇಶದ ಪೂರ್ಣ ವಿವರ ಲಭ್ಯವಾಗಿಲ್ಲ. 'ಸರ್ಕಾರ ಪರ ವಕೀಲರು, ಈ ಘಟನೆಯು ಬಾಂಬ್ ಸ್ಫೋಟ ಕೃತ್ಯ ಎಂದು ನಿರೂಪಿಸಲು ವಿಫಲವಾದರು' ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ.
ಸ್ಫೋಟ ಕೃತದಲ್ಲಿ ಒಟ್ಟು 12 ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಇಬ್ಬರು ಸ್ಫೋಟ ಸ್ಥಳದಲ್ಲಿಯೇ ಅಸುನೀಗಿದ್ದರು. ವಿಚಾರಣೆ ಹಂತದಲ್ಲಿ ಒಬ್ಬರು ಮೃತಪಟ್ಟಿದ್ದರು.
ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿ.ವಿ.ಮರಾಠೆ ಅವರು ಶನಿವಾರ ಎಲ್ಲ 9 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದರು.
ನಾಂದೇಡ್ ನಗರದ ನಿವಾಸಿ, ಆರ್‌ಎಸ್‌ಎಸ್ ಕಾರ್ಯಕರ್ತ ಎನ್ನಲಾದ ಲಕ್ಷ್ಮಣ ರಾಜ್‌ಕೊಂಡ್ವಾರ್ ಅವರ ಮನೆಯಲ್ಲಿ 2006ರ ಏಪ್ರಿಲ್ 4ರ ಮಧ್ಯರಾತ್ರಿ ಸ್ಫೋಟ ಸಂಭವಿಸಿತ್ತು.
ರಾಜ್‌ಕೊಂಡ್ವಾರ್ ಅವರ ಪುತ್ರ ನರೇಶ್ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಹಿಮಾಂಶು ಪಾನ್ಸೆಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಆರಂಭದಲ್ಲಿ ಮುಂಬೈನ ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್) ಕೃತ್ಯದ ತನಿಖೆ ನಡೆಸಿದ್ದು, ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ಹಸ್ತಾಂತರಿಸಲಾಗಿತ್ತು.