ಜೋಧಪುರ: 2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ರಾಜಸ್ಥಾನದ ಹೈಕೋರ್ಟ್ ಮಾರ್ಚ್ 31ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ಚಿಕಿತ್ಸೆಗಾಗಿ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾರ್ಚ್ 31ರವರೆಗೆ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಹೈಕೋರ್ಟ್ ಸಹ ಜಾಮೀನು ನೀಡಿದೆ.
ವೈದ್ಯಕೀಯ ಚಿಕಿತ್ಸೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡುತ್ತಿದ್ದಂತೆ ಅವರ ಪರ ವಕೀಲರು ಜೀವಾವಧಿ ಶಿಕ್ಷೆ ಅಮಾನತು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ವಿನೀತ್ ಕುಮಾರ್ ಮಾಥುರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಆಸಾರಾಮ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅರ್ಜಿಯ ಸ್ವರೂಪವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನೇ ಹೋಲುತ್ತದೆ ಎಂದು ನಮ್ಮ ಅರ್ಜಿಯನ್ನು ಪುರಸ್ಕರಿಸಿದೆ ಎಂದು ಅಸಾರಾಂ ಪರ ವಕೀಲ ನಿಶಾಂತ್ ಬೋರಾ ಹೇಳಿದ್ದಾರೆ.
ಅಸಾರಾಂ ಅವರ ಮಧ್ಯಂತರ ಜಾಮೀನಿಗೆ ಸುಪ್ರೀಂ ಕೋರ್ಟ್ ಜನವರಿ 7ರಂದು ನಿಗದಿಪಡಿಸಿದ ಷರತ್ತುಗಳೇ ಅನ್ವಯವಾಗಲಿವೆ ಎಂದು ಅವರು ಹೇಳಿದ್ದಾರೆ.
'ಅಸಾರಾಮ್ ಹೊರಗೆ ಪ್ರಯಾಣಿಸಲು ಬಯಸಿದರೆ, ಅವರೊಂದಿಗೆ ಹೋಗುವ ಮೂವರು ಕಾನ್‌ಸ್ಟೆಬಲ್‌ಗಳ ವೆಚ್ಚವನ್ನು ಭರಿಸಬೇಕಾಗುತ್ತದೆ'ಎಂದು ಬೋರಾ ಹೇಳಿದ್ದಾರೆ.
2013ರಲ್ಲಿ ಜೋಧ್‌ಪುರದ ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಕ್ಕಾಗಿ ಕೆಳ ನ್ಯಾಯಾಲಯವು 2018ರ ಏಪ್ರಿಲ್‌ನಲ್ಲಿ ಆಸಾರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.