ಲಖನೌ: 2018ರ ತಿರಂಗಾ ಯಾತ್ರೆ ವೇಳೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಸಂಭವಿಸಿದ ಕೋಮು ಗಲಭೆ ಮತ್ತು ಚಂದನ್ ಗುಪ್ತಾ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯವು 28 ಮಂದಿ ತಪ್ಪಿತಸ್ಥರು ಎಂದು ತೀರ್ಪಿತ್ತಿದೆ.
ಹತ್ಯೆ, ಹತ್ಯೆ ಯತ್ನ, ಗಲಭೆ ಮತ್ತು ರಾಷ್ಟ್ರಧ್ವಜಕ್ಕೆ ಅಪಮಾನ ಅಪರಾಧದಡಿ ದೋಷಿಗಳೆಂದು ತೀರ್ಪು ನೀಡಲಾಗಿದೆ.
ಇಂದೇ ಶಿಕ್ಷೆ ಸಹ ಪ್ರಕಟವಾಗುವ ಸಾಧ್ಯತೆ ಇದೆ.
ನಾಸಿರುದ್ದೀನ್ ಮತ್ತು ಅಸೀಂ ಖುರೇಷಿ ಎಂಬವರನ್ನು ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.
2018ರ ಜನವರಿ 26ರ ಬೆಳಿಗ್ಗೆ, ಚಂದನ್ ಗುಪ್ತಾ ಮತ್ತು ಅವರ ಸಹೋದರ ವಿವೇಕ್ ಗುಪ್ತಾ ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯು ತಹಸಿಲ್ ರಸ್ತೆಯ ಸರ್ಕಾರಿ ಬಾಲಕಿಯರ ಅಂತರ ಕಾಲೇಜು ಗೇಟ್ ಬಳಿ ತಲುಪಿದಾಗ, ಸಲೀಂ, ವಾಸಿಂ ಮತ್ತು ನಸೀಮ್ ಸೇರಿದಂತೆ ಒಂದು ಗುಂಪು ರಸ್ತೆ ತಡೆದು ಮೆರವಣಿಗೆಯನ್ನು ನಿಲ್ಲಿಸಿತ್ತು. ಇದಕ್ಕೆ ಚಂದನ್ ಆಕ್ಷೇಪ ವ್ಯಕ್ತಪಡಿಸಿದಾಗ, ಪರಿಸ್ಥಿತಿ ಬಿಗಡಾಯಿಸಿತ್ತು. ಆರೋಪಿಗಳ ಕಡೆಯಿಂದ ಕಲ್ಲು ತೂರಾಟ ಪ್ರಾರಂಭವಾಗಿತ್ತು ಎಂದು ವಕೀಲರು ಹೇಳಿದ್ದಾರೆ.
ಈ ವೇಳೆ, ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸಲೀಂ, ಚಂದನ್‌ಗೆ ಗುಂಡು ಹಾರಿಸಿದ್ದು, ಚಂದನ್ ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಚಂದನ್‌ನನ್ನು ವಿವೇಕ್ ಮತ್ತು ಅವರ ಸಹಚರರು ಕಾಸ್‌ಗಂಜ್ ಪೊಲೀಸ್ ಠಾಣೆಗೆ ಕರೆತಂದಿದ್ದರು. ಅಲ್ಲಿಂದ ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಸ್ವಲ್ಪ ಸಮಯದ ಬಳಿಕ ಚಂದನ್ ಮೃತಪಟ್ಟಿದ್ದರು.
ಚಂದನ್ ಹತ್ಯೆಯು ಕಾಸ್‌ಗಂಜ್‌ನಲ್ಲಿ ಮೂರು ದಿನಗಳ ಕಾಲ ವ್ಯಾಪಕ ಗಲಭೆಗೆ ಕಾರಣವಾಗಿತ್ತು. ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ಚಂದನ್ ತಂದೆ ಸುಶೀಲ್ ಗುಪ್ತಾ ಹತ್ಯೆ ಪ್ರಕರಣ ದಾಖಲಿಸಿದ್ದರು.