ನವದೆಹಲಿ: ರಕ್ಷಣಾ ಸಚಿವಾಲಯವು 2025 ಅನ್ನು 'ಸುಧಾರಣೆಗಳ ವರ್ಷ' ಎಂದು ಘೋಷಿಸಿದೆ. ಭಾರತೀಯ ಸೇನೆಯ ಮೂರೂ ಪಡೆಗಳನ್ನು ಪರಸ್ಪರ ಒಗ್ಗೂಡಿಸಿ, ಸಮಗ್ರವಾಗಿ ಸದೃಢಗೊಳಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳ ಜೊತೆಗೆ, ಬಹುಹಂತದ ಕಾರ್ಯಾಚರಣೆಯನ್ನು ನಡೆಸಲು ಈ ಮೂರೂ ಪಡೆಗಳನ್ನು ಸಜ್ಜುಗೊಳಿಸಲು ಅಗತ್ಯವಿರುವ ಸುಧಾರಣಾ ಕ್ರಮಗಳನ್ನು ಈ ವರ್ಷದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಸೈಬರ್, ಬಾಹ್ಯಾಕಾಶ ಕ್ಷೇತ್ರ, ಕೃತಕ ಬುದ್ಧಿಮತ್ತೆ, ಹೈಪರ್‌ಸಾನಿಕ್ ಮತ್ತು ರೊಬೊಟಿಕ್ಸ್ ಕ್ಷೇತ್ರಗಳನ್ನು ಒಳಗೊಂಡು ಹೊಸ ಕ್ಷೇತ್ರಗಳತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಾಗುವುದು ಎಂದೂ ವಿವರಿಸಿದೆ.
ಸೇನೆಯ ಆಧುನೀಕರಣ ಪ್ರಕ್ರಿಯೆ ನಿಟ್ಟಿನಲ್ಲಿ 'ಸುಧಾರಣೆಗಳ ವರ್ಷ'ವು ಮಹತ್ವದ್ದಾಗಿದೆ. ದೇಶದ ಸಾರ್ವಭೌಮತೆ ಮತ್ತು ಭದ್ರತೆ ಹಾಗೂ 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುವುದು ಒಟ್ಟು ಆದ್ಯತೆಯಾಗಿದೆ ಎಂದು ತಿಳಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಭೆಯಲ್ಲಿ 2025 ಅನ್ನು 'ಸುಧಾರಣೆಗಳ ವರ್ಷ'ವಾಗಿ ಘೋಷಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.