ನವದೆಹಲಿ: ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲೀಯರು ಅಟ್ಟಹಾಸ ಮೆರೆದಿದ್ದು, ಜಂಟಿ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದ ಡಿಆರ್‌ಜಿ ಯೋಧರ ವಾಹನವನ್ನು ಐಇಡಿ ಮೂಲಕ ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಒಂಬತ್ತು ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ವ್ಯಕ್ತಪಡಿಸಿದ್ದಾರೆ. ಯೋಧರ ತ್ಯಾಗ ವ್ಯರ್ಥವಾಗಲು ಬಿಡಲ್ಲ ಎಂದು ಗುಡುಗಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಬಿಜಾಪುರದಲ್ಲಿ (ಛತ್ತೀಸ್‌ಗಢ) ಐಇಡಿ ಸ್ಫೋಟದಲ್ಲಿ ಡಿಆರ್‌ಜಿ ಯೋಧರನ್ನು ಕಳೆದುಕೊಂಡ ಸುದ್ದಿಯಿಂದ ತುಂಬಾ ದುಃಖವಾಗಿದೆ. ವೀರ ಯೋಧರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ, ಆದರೆ ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಾವು ಮಾರ್ಚ್ 2026ರ ವೇಳೆಗೆ ಭಾರತದ ನೆಲದಿಂದ ನಕ್ಸಲಿಸಂ ನಿರ್ಮೂಲನೆ ಮಾಡುತ್ತೇವೆ ಎಂದು ಬರೆದಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಕೂಡ ನಕ್ಸಲೀಯರ ಈ ಹೇಡಿತನದ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳಿಗೆ ನನ್ನ ಸಂತಾಪ. ಹುತಾತ್ಮ ಯೋಧರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಮತ್ತು ಮೃತರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಬಸ್ತಾರ್ ನಲ್ಲಿ ನಡೆಯುತ್ತಿರುವ ನಕ್ಸಲ್ ನಿರ್ಮೂಲನಾ ಅಭಿಯಾನದಿಂದ ನಕ್ಸಲೀಯರು ಭಯಗೊಂಡಿದ್ದು, ಹತಾಶೆಯಿಂದ ಇಂತಹ ಹೇಡಿತನದ ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿಷ್ಣುದೇವ್ ಸಾಯಿ ಹೇಳಿದ್ದಾರೆ. ಸೈನಿಕರ ಬಲಿದಾನ ವ್ಯರ್ಥವಾಗುವುದಿಲ್ಲ, ನಕ್ಸಲ್ ವಾದವನ್ನು ಕೊನೆಗಾಣಿಸಲು ನಮ್ಮ ಹೋರಾಟ ಬಲವಾಗಿ ಮುಂದುವರಿಯಲಿದೆ ಎಂದರು.
ಕುಟ್ರು ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಮಧ್ಯಾಹ್ನ 2.15ರ ಸುಮಾರಿಗೆ ನಕ್ಸಲೀಯರು ನೆಲಬಾಂಬ್ ಸ್ಫೋಟಿಸಿ ಸೇನಾ ವಾಹನವನ್ನು ಸ್ಫೋಟಿಸಿದ್ದಾರೆ ಎಂದು ಬಸ್ತಾರ್ ರೇಂಜ್ ಐಜಿ ತಿಳಿಸಿದ್ದಾರೆ. ದಾಂತೇವಾಡ ಜಿಲ್ಲೆಯ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಗಿಸಿ ತಮ್ಮ ಎಸ್‌ಯುವಿ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಡಿಆರ್‌ಜಿಯು ರಾಜ್ಯ ಪೋಲೀಸ್‌ನ ಒಂದು ಘಟಕವಾಗಿದ್ದು, ಸ್ಥಳೀಯ ಆದಿವಾಸಿಗಳು ಮತ್ತು ಶರಣಾದ ನಕ್ಸಲೀಯರಿಂದ ಹೆಚ್ಚಾಗಿ ನೇಮಕಗೊಳ್ಳುತ್ತಾರೆ.