ಚೆನ್ನೈ: ಇಲ್ಲಿರುವ ಸಮಗ್ರ ಬೋಗಿ ಕಾರ್ಖಾನೆಯಲ್ಲಿ ವಂದೇ ಭಾರತ್ 2.0 ರೈಲಿನ ಬೋಗಿ ನಿರ್ಮಾಣವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಪರಿಶೀಲನೆ ನಡೆಸಿದರು.
ಕಾರ್ಖಾನೆಯಲ್ಲಿ ವಂದೇ ಭಾರತ್ 2.0 ರೈಲಿನ ಸ್ಲೀಪರ್ ಕೋಚ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಸಚಿವರು ವೀಕ್ಷಿಸಿದರು.
1955ರಲ್ಲಿ ಆರಂಭವಾದ ಈ ಬೋಗಿ ನಿರ್ಮಾಣ ಕಾರ್ಖಾನೆಯು 511ಕ್ಕೂ ಅಧಿಕ ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. 9,300ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ 2,500ಕ್ಕೂ ಅಧಿಕ ಬೋಗಿಗಳು ಇಲ್ಲಿ ನಿರ್ಮಾಣವಾಗುತ್ತವೆ.
ವಂದೇ ಭಾರತ್ 2.0ನಲ್ಲಿ ರೈಲ್ವೆ ಅಪಘಾತ ತಡೆಯುವ 'ಕವಚ್' ವ್ಯವಸ್ಥೆ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಇರಲಿದೆ. ಈ ರೈಲುಗಳು ಶೇ 30ರಷ್ಟು ಕಡಿಮೆ ವಿದ್ಯುತ್ ಬಳಕೆ ಮಾಡುತ್ತವೆ.
ಗರಿಷ್ಠ 180 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯದ ಈ ರೈಲು, 392 ಟನ್ ತೂಕವಿರಲಿದೆ. ವಂದೇ ಭಾರತ್ 2.0 ಉತ್ತಮ ಅಗ್ನಿ ಸುರಕ್ಷತಾ ವೈಶಿಷ್ಟ್ಯಗಳನ್ನು ಮತ್ತು 650 ಎಂಎಂ ಎತ್ತರದವರೆಗೆ ಪ್ರವಾಹವನ್ನು ತಡೆದುಕೊಳ್ಳುವ ಪ್ರವಾಹ ನಿರೋಧಕ ಕಾರ್ಯವಿಧಾನವನ್ನು ಹೊಂದಿದೆ.