ಚಂಡೀಗಢ: ಮದುವೆ ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡದಂತೆ ಮತ್ತು ಮದ್ಯದ ಬಳಕೆಯನ್ನು ತಡೆಯಲು ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಾಲೋ ಗ್ರಾಮ ಪಂಚಾಯತಿಯು ಆಶೀರ್ವಾದದ ಸಂಕೇತವಾಗಿ 21,000 ರೂ ನಗದು ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.
ಗ್ರಾಮದಲ್ಲಿ ನಡೆಯುವ ಮದುವೆಗಳಲ್ಲಿ ಮದ್ದ, ಡಿಜೆ ನಿಷೇಧಿಸಲಾಗಿದ್ದು, ಎನರ್ಜಿ ಡ್ರಿಂಕ್ಸ್ ಮಾರಾಟವನ್ನೂ ನಿಷೇಧಿಸಲಾಗಿದೆ.
ಮದ್ಯ ಸೇವಿಸುವ ಸಮಾರಂಭಗಳಲ್ಲಿ ಆಗಾಗ್ಗೆ ಜಗಳಗಳು ನಡೆಯುವುದು ಸಾಮಾನ್ಯವಾಗಿ ಕಂಡುಬರುತ್ತಿದೆ ಮತ್ತು ಡಿಸ್ಕ್ ಜಾಕಿಗಳು(ಡಿಜೆಗಳು) ಬಾರಿಸುವ ಜೋರಾದ ಸಂಗೀತ ಕಿರಿ ಕಿರಿ ಉಂಟು ಮಾಡುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡದಂತೆ ಗ್ರಾಮಸ್ಥರನ್ನು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಾಲ್ಲೊ ಗ್ರಾಮದ ಸರಪಂಚ್ ಅಮರ್‌ಜಿತ್ ಕೌರ್ ಹೇಳಿದ್ದಾರೆ.
"ಮದುವೆ ಸಮಾರಂಭಗಳಲ್ಲಿ ಕುಟುಂಬಕ್ಕೆ ಮದ್ಯ ನೀಡದಿದ್ದರೆ ಹಾಗೂ ಡಿಜೆ ಮ್ಯೂಸಿಕ್ ನುಡಿಸದಿದ್ದರೆ 21,000 ರೂ. ನೀಡಲಾಗುವುದು ಎಂದು ಪಂಚಾಯಿತಿ ನಿರ್ಣಯ ಅಂಗೀಕರಿಸಿದೆ’’ ಎಂದು ಗ್ರಾಮದ ಸರಪಂಚ್ ತಿಳಿಸಿದ್ದಾರೆ.
ಈ ಉಪಕ್ರಮವು ಪಂಜಾಬಿ ಸಂಸ್ಕೃತಿಯೊಂದಿಗೆ ಸಂಯೋಜಿಸಲ್ಪಟ್ಟ ಸಮಚಿತ್ತ ಮತ್ತು ಅರ್ಥಪೂರ್ಣ ಆಚರಣೆಗಳನ್ನು ಸ್ವೀಕರಿಸಲು ಗ್ರಾಮಸ್ಥರನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದಾರೆ.
"ಮದುವೆಗಳು ಸಂತೋಷ ಮತ್ತು ಸಾಮರಸ್ಯದ ಸಂಕೇತವಾಗಬೇಕೇ ಹೊರತು ಅವ್ಯವಸ್ಥೆ ಅಥವಾ ಜಗಳಗಳಿಗೆ ಕಾರಣವಾಗಬಾರದು. ಮದುವೆ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಜವಾಬ್ದಾರಿಯನ್ನು ಉತ್ತೇಜಿಸುವ ಮೂಲಕ ನಾವು ಇತರ ಹಳ್ಳಿಗಳಿಗೆ ಮಾದರಿಯಾಗಲು ಬಯಸುತ್ತೇವೆ" ಎಂದು ಕೌರ್ ತಿಳಿಸಿದ್ದಾರೆ.