ಅಹಮದಾಬಾದ್: ರಾಜ್ಯದಲ್ಲಿ ಉತ್ತರಾಯಣದ ಗಾಳಿಪಟ ಉತ್ಸವದ ವೇಳೆ ನಡೆದಿರುವ ಪ್ರತ್ಯೇಕ ಅವಘಡಗಳಲ್ಲಿ 22 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಮಾಂಜಾ ದಾರ ಕುತ್ತಿಗೆ ಸೀಳಿ ಮತ್ತು ಗಾಳಿ ಪಟ ಹಾರಿಸುವಾಗ ಆಯತಪ್ಪಿ ಟೆರೇಸ್‌ನಿಂದ ಬಿದ್ದು ಸತ್ತಿದ್ದಾರೆ.
ಮೃತಪಟ್ಟವರಲ್ಲಿ ಪಂಚಮಹಲ್ ಜಿಲ್ಲೆಯ ನಾಲ್ಕು ವರ್ಷದ ಬಾಲಕ ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾರಕ ಗಾಜು ಲೇಪಿತ ದಾರ ಅಥವಾ ಮಾಂಜಾ ಆ ಬಾಲಕನ ಕುತ್ತಿಗೆಯನ್ನು ಸೀಳಿತ್ತು.
ಪಟಾನ್ ಜಿಲ್ಲೆಯ ಬಿಲ್ಡರ್ ಒಬ್ಬರ ಮಗ ಗಾಳಿಪಟದ ದಾರದಿಂದ ಗಾಯಗೊಂಡ ನಂತರ ಆತನ ಕುತ್ತಿಗೆಗೆ ಸುಮಾರು 200 ಹೊಲಿಗೆಗಳನ್ನು ಹಾಕಲಾಗಿದೆ. ಭರೂಚ್‌ನಲ್ಲಿ 32 ವರ್ಷದ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾಂಜಾ ಕುತ್ತಿಗೆ ಕೊಯ್ದು ಮೃತಪಟ್ಟಿದ್ದಾರೆ.
ರಾಜ್‌ಕೋಟ್, ಮೆಹ್ಸಾಣಾ, ಸೂರತ್ ಮತ್ತು ಅಹಮದಾಬಾದ್ ನಂತರದಲ್ಲಿ ಅತಿ ಹೆಚ್ಚು ಅವಘಡಗಳು ವಡೋದರಾದಿಂದ ವರದಿಯಾಗಿವೆ. ಅಂದಾಜಿನ ಪ್ರಕಾರ, ಹಬ್ಬದ ಸಮಯದಲ್ಲಿ 2,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಾಜ್ಯ ತುರ್ತು ಆರೋಗ್ಯ ಸೇವೆಯ ಮಾಹಿತಿಯ ಪ್ರಕಾರ, ಉತ್ತರಾಯಣ ಆಚರಿಸುವ ಜನವರಿ 14 ರಂದು ಗಾಳಿಪಟದ ದಾರದಿಂದ 168 ಮಂದಿ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಜನವರಿ 15ರಂದು ಇಂತಹ 67 ಪ್ರಕರಣಗಳು ವರದಿಯಾಗಿವೆ.
ಮಾಂಜಾ ತಯಾರಿಸುವುದು, ಮಾರಾಟ ಮಾಡುವುದು ಮತ್ತು ಸಂಗ್ರಹಿಸಿದ್ದಕ್ಕಾಗಿ 600ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ, ಎಫ್‌ಐಆರ್ ದಾಖಲಿಸಿದ್ದಾರೆ.
ಗುಜರಾತ್ ಹೈಕೋರ್ಟ್ ನಿರ್ದೇಶನದ ಮೇರೆಗೆ ಮಾಂಜಾ ವಿರುದ್ಧ ರಾಜ್ಯ ಸರ್ಕಾರ ನಡೆಸಿದ ಅಭಿಯಾನದ ಹೊರತಾಗಿಯೂ ಇಷ್ಟೊಂದು ಅವಘಡಗಳು ಸಂಭವಿಸಿವೆ.