ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿ 22 ಮಂದಿಯಲ್ಲಿ ಶಂಕಿತ ಗಿಲ್ಲೈನ್ ಬರ್ರೆ ಸಿಂಡ್ರೋಮ್(ಜಿಬಿಎಸ್) ಪತ್ತೆಯಾಗಿದೆ.
ಈ ಪೈಕಿ ಬಹುತೇಕ ಪ್ರಕರಣಗಳು ನಗರದ ಸಿಂಹಘಡ ರೋಡ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಈ ಕುರಿತಂತೆ ಪುಣೆ ಪಾಲಿಕೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ.
ಇದೊಂದು ನರಸಂಬಂಧಿತ ಅಸ್ವಸ್ಥತೆಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಬಾಹ್ಯ ನರಮಂಡಲದ ಮೇಲೆ ದಾಳಿ ಮಾಡಿದಾಗ ಸಂಭವಿಸುತ್ತದೆ. ದೇಹ ಮರಗಟ್ಟುವಿಕೆ, ಸ್ನಾಯು ದೌರ್ಬಲ್ಯವನ್ನು ಉಂಟುಮಾಡುತ್ತದೆ, ಕೈಕಾಲುಗಳಲ್ಲಿ ತೀವ್ರ ದೌರ್ಬಲ್ಯ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ನಗರದ ಮೂರ್ನಾಲ್ಕು ಆಸ್ಪತ್ರೆಯಲ್ಲಿ ಈ ಶಂಕಿತ ಜಿಬಿಎಸ್‌ನ 22 ಪ್ರಕರಣಗಳು ವರದಿಯಾಗಿವೆ ಎಂದು ಪಾಲಿಕೆ ಆರೋಗ್ಯ ಸಮಿತಿಯ ಮುಖ್ಯಸ್ಥರಾದ ಡಾ. ನೀನಾ ಬರೊಡೆ ತಿಳಿಸಿದ್ದಾರೆ.
'ಶಂಕಿತ ಜಿಬಿಎಸ್ ಪ್ರಕರಣಗಳು ಕಳೆದ ಎರಡು ದಿನಗಳಿಂದ ಪತ್ತೆಯಾಗಿದ್ದು, ಈ ಬಗ್ಗೆ ಕೂಲಕಂಷ ಪರಿಶೀಲನೆಗೆ ನುರಿತ ತಜ್ಞರ ಸಮಿತಿ ರಚಿಸಲಾಗಿದೆ. ಈ ಶಂಕಿತರ ಪ್ರಯೋಗಾಲಯ ಮಾದರಿಯನ್ನು ಐಸಿಎಂಆರ್-ಎನ್‌ಐವಿಗಳಿಗೂ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ'ಎಂದೂ ಅವರು ಹೇಳಿದ್ದಾರೆ.
ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ಜಿಬಿಎಸ್ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಬೊರಡೆ ಹೇಳಿದ್ದಾರೆ.