ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 22 ಸಾವಿರಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳು ದ್ವಿಪೌರತ್ವ (ಎರಡು ರಾಷ್ಟ್ರಗಳ ಪೌರತ್ವ) ಹೊಂದಿದ್ದಾರೆ ಎಂದು ಪಾಕ್‌ನ ರಾಷ್ಟ್ರೀಯ ಅಸೆಂಬ್ಲಿ ರಚಿಸಿದ್ದ ತಜ್ಞರ ಸಮಿತಿ ತಿಳಿಸಿದೆ.
ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ದ್ವಿಪೌರತ್ವ ಹೊಂದಿದಲ್ಲಿ, ರಾಷ್ಟ್ರೀಯ ಭದ್ರತೆಗೆ ಭಂಗವನ್ನುಂಟು ಮಾಡುವ ಗಂಭೀರ ಅಪಾಯವಿದೆ.
ಹಾಗಾಗಿ ಅಧಿಕಾರಿಗಳು ದ್ವಿಪೌರತ್ವ ಪಡೆಯದಂತೆ ನಿಯಮ ರೂಪಿಸಬೇಕು ಎಂದು ರಾಜಾ ಖುರ್‍ರಂ ನವಾಜ್ ನೇತೃತ್ವದ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ ಎಂದು 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನವು ಅಮೆರಿಕ ಸೇರಿ ಕೆಲ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪಾಕಿಸ್ತಾನದ ಪ್ರಜೆಗಳು ದ್ವಿಪೌರತ್ವ ಹೊಂದಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಯೋಧರು, ಸಂಸದರು ಹಾಗೂ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳು ದ್ವಿಪೌರತ್ವ ಹೊಂದಲು ಅವಕಾಶವಿಲ್ಲ.