HEALTH TIPS

ಹವಾಮಾನ ವೈಪರೀತ್ಯಕಳೆದ ವರ್ಷ 25 ಕೋಟಿ ಮಕ್ಕಳ ಶಿಕ್ಷಣಕ್ಕೆ ತೊಡಕು

ಕೇಪ್‌ಟೌನ್‌: ಬಿಸಿಗಾಳಿ, ಚಂಡಮಾರುತ, ಪ್ರವಾಹ ಮತ್ತು ಇತರ ಹವಾಮಾನ ವೈಪರೀತ್ಯಗಳಿಂದ ಕಳೆದ ವರ್ಷ ವಿಶ್ವದ 85 ದೇಶಗಳಲ್ಲಿ ಕನಿಷ್ಠ 24.2 ಕೋಟಿ ಮಕ್ಕಳ ಶಾಲಾ ಶಿಕ್ಷಣಕ್ಕೆ ಅಡೆತಡೆ ಎದುರಾಗಿತ್ತು ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ಶುಕ್ರವಾರ ತಿಳಿಸಿದೆ.

2024ರ ಕೆಲ ಸಂದರ್ಭದಲ್ಲಿ, ಶಾಲೆಗೆ ಹೋಗುವ ಪ್ರತಿ ಏಳು ಮಕ್ಕಳ ಪೈಕಿ ಒಬ್ಬರು ತರಗತಿಯಿಂದ ಹೊರಗುಳಿದಿದ್ದರು ಎಂದು ಯುನಿಸೆಫ್‌ ಹೊಸ ವರದಿಯಲ್ಲಿ ಹೇಳಿದೆ.

ಹವಾಮಾನ ವ್ಯತ್ಯಾಸಗಳ ಪರಿಣಾಮ, ಏಷ್ಯಾ ಮತ್ತು ಆಫ್ರಿಕಾದಲ್ಲಿನ ಕಡಿಮೆ ಆದಾಯದ ದೇಶಗಳಲ್ಲಿ ನೂರಾರು ಶಾಲೆಗಳೇ ನಾಶವಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಇಟಲಿಯಲ್ಲಿ ಕಳೆದ ವರ್ಷಾಂತ್ಯದಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಪ್ರವಾಹದಿಂದ 9 ಲಕ್ಷಕ್ಕೂ ಹೆಚ್ಚು ಮಕ್ಕಳ ಶಾಲಾ ಶಿಕ್ಷಣಕ್ಕೆ ತೊಂದರೆಯಾಗಿತ್ತು. ಅಂತೆಯೇ ಸ್ಪೇನ್‌ನಲ್ಲಿ ಸಂಭವಿಸಿದ ಪ್ರವಾಹದಿಂದಲೂ ಸಹಸ್ರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಿದೆ.

ಕಳೆದ ವರ್ಷ ದಕ್ಷಿಣ ಯುರೋಪ್‌ ಭಾರಿ ಮಳೆ ಮತ್ತು ಪ್ರವಾಹಗಳನ್ನು ಕಂಡಿದ್ದರೆ, ಏಷ್ಯಾ ಮತ್ತು ಆಫ್ರಿಕಾದ ದೇಶಗಳು ಚಂಡಮಾರುತ, ಪ್ರವಾಹ ಮತ್ತು ಬಿಸಿಗಾಳಿಯನ್ನು ಎದುರಿಸಿವೆ. ಇದೆಲ್ಲದರ ಪರಿಣಾಮ ಹಲವು ಶಾಲೆಗಳು ಬಾಗಿಲು ಮುಚ್ಚಿದವು ಎಂದು ಯುನಿಸೆಫ್‌ ಹೇಳಿದೆ.

2024ರಲ್ಲಿ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಬಿಸಿಗಾಳಿಯ ಪರಿಣಾಮ ಕಳೆದ ವರ್ಷದ ಏಪ್ರಿಲ್‌ ತಿಂಗಳಲ್ಲಿಯೇ 11.8 ಕೋಟಿ ಮಕ್ಕಳ ಶಾಲಾ ಶಿಕ್ಷಣಕ್ಕೆ ಅಡೆತಡೆ ಎದುರಾಯಿತು. ಮಧ್ಯಪ್ರಾಚ್ಯ, ಏಷ್ಯಾದ ಹಲವು ಭಾಗಗಳು, ಪಶ್ಚಿಮ ಗಾಜಾದಿಂದ ಆಗ್ನೇಯ ಫಿಲಿಪ್ಪಿನ್ಸ್‌ವರೆಗೆ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿತ್ತು ಎಂದು ಅದು ವರದಿಯಲ್ಲಿ ಉಲ್ಲೇಖಿಸಿದೆ.

'ಬಿಸಿಗಾಳಿ, ಬರ, ಪ್ರವಾಹಗಳಿಂದ ಮಕ್ಕಳು ಬಸವಳಿದು ದುರ್ಬಲರಾಗುತ್ತಾರೆ. ಬಿಸಿಲಿನ ತಾಪದಿಂದಾಗಿ ಮಕ್ಕಳಲ್ಲಿ ಏಕಾಗ್ರತೆ ಕೇಂದ್ರೀಕರಿಸಲು ಸಾಧ್ಯವಿಲ್ಲ' ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಕ್ಯಾಥರಿನ್‌ ರಸೆಲ್‌ ತಿಳಿಸಿದ್ದಾರೆ.

'ಇನ್ನು ಚಂಡಮಾರುತ, ಪ್ರವಾಹಗಳಿಂದ ಹಲವೆಡೆ ಶಾಲೆಗಳೇ ಕೊಚ್ಚಿ ಹೋಗಿವೆ. ಇದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಬಾಧಿತರಾದವರಲ್ಲಿ ಶೇ 74ರಷ್ಟು ಮಕ್ಕಳು ಕಡಿಮೆ ಆದಾಯದ ದೇಶಗಳಿಗೆ ಸೇರಿದವರಾಗಿದ್ದಾರೆ. ಪಾಕಿಸ್ತಾನದಲ್ಲಿ ಏಪ್ರಿಲ್‌ನಲ್ಲಿ ಪ್ರವಾಹದಿಂದಾಗಿ 400 ಶಾಲೆಗಳು ನಾಶವಾದವು ಎಂದು ವರದಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries