ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೂರನೇ ತಲೆಮಾರಿನ ಟ್ಯಾಂಕ್ ಪ್ರತಿಬಂಧಕ ಕ್ಷಿಪಣಿ ನಾಗ್ ಎಂಕೆ-2 ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿತು.
ರಾಜಸ್ಥಾನದ ಪೋಖ್ರಾನ್‌ನಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಇತ್ತೀಚೆಗೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಮೂರು ಬಾರಿ ಪ್ರಯೋಗ ನಡೆಸಲಾಯಿತು. ಈ ಸಂದರ್ಭದಲ್ಲಿ ನೀಡಲಾದ ಎಲ್ಲಾ ಗುರಿಗಳನ್ನು ಕ್ಷಿಪಣಿಯು ಹೊಡೆದುರುಳಿಸಿತು ಎಂದು ತಿಳಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಸೇನೆ ಮತ್ತು ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾಗಿಯಾದ ಕೈಗಾರಿಕೆಗೆ ಅಭಿನಂದನೆ ತಿಳಿಸಿದ್ದಾರೆ.