ನವದೆಹಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್ ವ್ಯಾಪ್ತಿಯ ಪ್ರದೇಶಗಳನ್ನು ಒಳಗೊಂಡಿರುವ ಎರಡು ಹೊಸ 'ಕೌಂಟಿ'ಗಳನ್ನು ಚೀನಾ ರಚಿಸಿದೆ. ಚೀನಾದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ, 'ತೀವ್ರ ಪ್ರತಿಭಟನೆ' ದಾಖಲಿಸಿದ್ದಾಗಿ ಶುಕ್ರವಾರ ಹೇಳಿದೆ.
'ತನ್ನ ಭೂಪ್ರದೇಶ ಕುರಿತು ಭಾರತ ಹೊಂದಿರುವ ಸಾರ್ವಭೌಮತೆ ಹಾಗೂ ನಿಲುವಿನ ಮೇಲೆ, ಹೊಸ 'ಕೌಂಟಿ'ಗಳನ್ನು ಸೃಷ್ಟಿಸಿರುವ ಚೀನಾದ ನಡೆಯಿಂದ ಯಾವುದೇ ಪರಿಣಾಮ ಉಂಟಾಗದು.
ಅಲ್ಲದೇ, ಇಂತಹ ನಡೆಯು, ಈ ಪ್ರದೇಶವನ್ನು 'ಅಕ್ರಮ'ವಾಗಿ ಹಾಗೂ 'ಬಲವಂತ'ದಿಂದ ಆಕ್ರಮಿಸಿಕೊಳ್ಳಲು ಚೀನಾಕ್ಕೆ ಯಾವುದೇ ಅಧಿಕಾರ ನೀಡುವುದಿಲ್ಲ' ಎಂದು ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಹೋಟನ್ ಪ್ರಾಂತ್ಯವು ಚೀನಾದ ವಾಯವ್ಯ ಭಾಗದಲ್ಲಿರುವ ಜಿನ್‌ಜಿಯಾಂಗ್ ಪ್ರದೇಶದಲ್ಲಿದೆ. ಹೊಸದಾಗಿ ರಚಿಸಲಾಗಿರುವ 'ಕೌಂಟಿ'ಗಳು ಹೋಟನ್ ಪ್ರಾಂತ್ಯದಲ್ಲಿವೆ ಎಂದು ಚೀನಾ ಹೇಳಿಕೊಂಡಿದೆ.
'ನಮ್ಮ ಭೂಭಾಗವನ್ನು ಆಕ್ರಮಿಸಿಕೊಳ್ಳುವ ಚೀನಾದ 'ಕಾನೂನುಬಾಹಿರ' ಕ್ರಮವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ.
'ಚೀನಾದ ಹೋಟನ್ ಪ್ರಾಂತ್ಯದಲ್ಲಿ ಎರಡು ಹೊಸ ಕೌಂಟಿಗಳನ್ನು ಸ್ಥಾಪನೆ ಮಾಡಿರುವುದಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಕೆಲ ಪ್ರದೇಶಗಳನ್ನು ಚೀನಾ ತನ್ನ ಹೊಸ 'ಕೌಂಟಿ'ಗಳ ವ್ಯಾಪ್ತಿಗೆ ಸೇರಿಸಿದೆ' ಎಂದು ಹೇಳಿದ್ದಾರೆ.
ಪೂರ್ವ ಲಡಾಖ್ ಗಡಿಯಲ್ಲಿ ನಾಲ್ಕೂವರೆ ವರ್ಷಗಳಿಂದ ನಿರ್ಮಾಣವಾಗಿದ್ದ ಸಂಘರ್ಷಮಯ ಸ್ಥಿತಿ ತಿಳಿಗೊಳಿಸುವ ಸಂಬಂಧ ಎರಡೂ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು.
ಉಭಯ ದೇಶಗಳ ನಡುವೆ ವಿಶ್ವಾಸ ವೃದ್ಧಿಗಾಗಿ, ಗಡಿ ಸ್ಥಳಗಳಲ್ಲಿ ನಿಯೋಜನೆಗೊಂಡಿದ್ದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಆದರೆ, ಚೀನಾ ಈ ಹೊಸ ಕ್ಯಾತೆ ತೆಗೆದಿದೆ.
ರಣಧೀರ ಜೈಸ್ವಾಲ್ ವಿದೇಶಾಂಗ ಸಚಿವಾಲಯ ವಕ್ತಾರಲಡಾಖ್‌ಗೆ ಸೇರಿದ ಪ್ರದೇಶ ಒಳಗೊಂಡ ಎರಡು ಹೊಸ ಕೌಂಟಿಗಳನ್ನು ರಚಿಸಿರುವ ಚೀನಾದ ನಡೆ ಖಂಡಿಸಿ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕ ಪ್ರತಿಭಟನೆ ದಾಖಲಿಸಿದೆ.