ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಸೋಮವಾರದಿಂದ ಆರಂಭಗೊಂಡಿದ್ದು, ಸಾಧು-ಸಂತರು ಸೇರಿ ದೇಶ-ವಿದೇಶಗಳಿಂದ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.
ಈ ಬಾರಿಯ 'ಮಹಾಕುಂಭ' ಮೇಳದಿಂದ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ₹2 ಲಕ್ಷ ಕೋಟಿ ಆದಾಯ ಬರುವ ಸಾಧ್ಯತೆ ಇದೆ ಎಂದು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
2019ರಲ್ಲಿ ನಡೆದಿದ್ದ ಕುಂಭಮೇಳದಲ್ಲಿ ರಾಜ್ಯ ಸರ್ಕಾರಕ್ಕೆ ₹1.2 ಲಕ್ಷ ಕೋಟಿ ಆದಾಯ ಬಂದಿತ್ತು ಎಂದು ಯೋಗಿ ಆದಿತ್ಯನಾಥ ಹೇಳಿರುವುದಾಗಿ 'ಎನ್‌ಡಿಟಿವಿ' ವರದಿ ಮಾಡಿದೆ.
ಈ ಬಾರಿ ಮಹಾಕುಂಭ ಮೇಳದಲ್ಲಿ 40 ಕೋಟಿಗೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹೀಗೆ ಪಾಲ್ಗೊಳ್ಳುವವರಲ್ಲಿ ಪ್ರತಿಯೊಬ್ಬರು ಕನಿಷ್ಠ ₹5,000 ಖರ್ಚು ಮಾಡಿದರೆ, ಅದರಿಂದ ಬರುವ ಆದಾಯವು ₹2 ಲಕ್ಷ ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಪ್ರತಿಯೊಬ್ಬರು ವೆಚ್ಚವು ₹10,000ಕ್ಕೆ ಏರಿದರೆ, ಉತ್ತರ ಪ್ರದೇಶ ಸರ್ಕಾರಕ್ಕೆ ₹4 ಲಕ್ಷ ಕೋಟಿ ಆದಾಯ ಗಳಿಸಬಹುದು. ಇದರಿಂದ ರಾಜ್ಯದ ನೈಜ ಜಿಡಿಪಿ ಶೇಕಡ 1ರಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಾರಿ ನಡೆಯುತ್ತಿರುವುದು 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ. ಹಿಂದಿನ ಬಾರಿ ಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು.
ಫೆಬ್ರುವರಿ 26ರವರೆಗೆ 45 ದಿನ ಮೇಳ ನಡೆಯಲಿದ್ದು, ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.