ನವದೆಹಲಿ: ಆತ್ಮಹತ್ಯೆ ಪ್ರಕರಣಗಳಲ್ಲಿ ಐಪಿಸಿ ಸೆಕ್ಷನ್ 306 ಅನ್ನು ಯಾಂತ್ರಿಕವಾಗಿ ಬಳಸುವುದನ್ನು ನಿಲ್ಲಿಸಬೇಕು. ಅಲ್ಲದೇ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೆ ಸಮಾಧಾನ ತರುವ ಏಕೈಕ ಉದ್ದೇಶದಿಂದಲೂ ಈ ಸೆಕ್ಷನ್ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಮಧ್ಯಪ್ರದೇಶದ ಮಹೇಂದ್ರ ಅವಸೆ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ಮಾತು ಹೇಳಿದೆ.
'ಇಂತಹ ಪ್ರಕರಣಗಳಿಗೆ ಸಂಬಂಧಿಸಿ ತನಿಖಾ ಸಂಸ್ಥೆಗಳು ಮತ್ತಷ್ಟು ಸಂವೇದನಾಶೀಲವಾಗಿರುವಂತೆ ನೋಡಿಕೊಳ್ಳಬೇಕು' ಎಂದು ಹೇಳಿದೆ.
ಐಪಿಸಿ ಸೆಕ್ಷನ್ 306, 'ಆತ್ಮಹತ್ಯೆಗೆ ಕುಮ್ಮಕ್ಕು' ನೀಡುವುದಕ್ಕೆ ಸಂಬಂಧಿಸಿದ್ದಾಗಿದೆ.
'ಪೊಲೀಸರು ತಕ್ಷಣವೇ ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲು ಮುಂದಾಗುತ್ತಾರೆ ಅನಿಸುತ್ತದೆ. ಆತ್ಮಹತ್ಯೆಗೆ ನಿಜವಾಗಿಯೂ ಕುಮ್ಮಕ್ಕು ನೀಡಿರುವ ವ್ಯಕ್ತಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ಆದರೆ, ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಕುಟುಂಬಕ್ಕೆ ತಕ್ಷಣವೇ ಸಮಾಧಾನ ನೀಡಬೇಕು ಎಂಬ ಉದ್ದೇಶದಿಂದ ಯಾವ ವ್ಯಕ್ತಿ ವಿರುದ್ಧವೂ ಕಾಯ್ದೆಯ ಈ ಅವಕಾಶವನ್ನು ಬಳಕೆ ಮಾಡಕೂಡದು' ಎಂದು ಪೀಠ ಹೇಳಿದೆ.
'ಇಂತಹ ಪ್ರಕರಣಗಳಲ್ಲಿ, ವಿಚಾರಣಾ ನ್ಯಾಯಾಲಯಗಳು ಕೂಡ ಬಹಳ ಎಚ್ಚರಿಕೆ ವಹಿಸಬೇಕು ಹಾಗೂ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು' ಎಂದೂ ಪೀಠ ಹೇಳಿದೆ.
ಐಪಿಸಿ ಸೆಕ್ಷನ್ 306ರಡಿ ದಾಖಲಾಗಿರುವ ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಕೋರಿ ಮಹೇಂದ್ರ ಅವಸೆ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿತ್ತು.
ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ, ಮಹೇಂದ್ರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಮಹೇಂದ್ರ ಅವರ ವಿರುದ್ಧ ಆರೋಪ ನಿಗದಿ ಮಾಡಲು ಯಾವುದೇ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.