ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ಕದನ ಮುಂದುವರಿದಿದ್ದು, ಮಂಗಳವಾರ ಇಸ್ರೇಲ್ ಸೇನೆ ನಡೆಸಿದ ಪ್ರತ್ಯೇಕ ವಾಯುದಾಳಿಯಲ್ಲಿ ಮಕ್ಕಳು ಸೇರಿ 30 ಮಂದಿ ಮೃತಪಟ್ಟಿದ್ದಾರೆ.
ಗಾಜಾದ ಡೇರ್ ಅಲ್ ಬಲಾಹ್ ನಗರದ ಕೇಂದ್ರ ಭಾಗವನ್ನು ಗುರಿಯಾಗಿಸಿ ಎರಡು ದಾಳಿ ನಡೆಯಿತು. 1 ತಿಂಗಳಿಂದ 9 ವರ್ಷದೊಳಗಿನ ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ 18 ಮಂದಿ ಮೃತಪಟ್ಟರು ಎಂದು ಅಲ್ ಅಕ್ಸಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ದಕ್ಷಿಣ ಭಾಗದ ಖಾನ್ ಯೂನಿಸ್ ನಗರದಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ 12 ಮಂದಿ ಮೃತಪಟ್ಟರು ಎಂದು ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಕುರಿತು ಇಸ್ರೇಲ್ ಸೇನೆ ಅಧಿಕೃತವಾಗಿ ಏನೂ ಪ್ರತಿಕ್ರಿಯಿಸಿಲ್ಲ. ಆದರೆ, ಬಂಡುಕೋರರ ಅಡಗುತಾಣ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಹಿಂದೆ ಪ್ರತಿಪಾದಿಸಿತ್ತು.
'ಇಸ್ರೇಲ್ ಮತ್ತು ಹಮಾಸ್ ನಡುವಣ ಸಂಘರ್ಷ ನಿಲ್ಲಿಸಲು ಕದನವಿರಾಮ ಮಾತುಕತೆ ನಡೆದಿದೆ. ಶೀಘ್ರವೇ ಒಪ್ಪಂದಕ್ಕೆ ಬರಲಾಗುತ್ತದೆ' ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. 'ಮಾತುಕತೆ ಈ ವಾರಾಂತ್ಯದ ವೇಳೆಗೆ ಅಂತ್ಯವಾಗಬಹುದು' ಎಂದು ನ್ಯೂಸ್ ಮ್ಯಾಕ್ಸ್ ಸುದ್ದಿವಾಹಿನಿಗೆ ಟ್ರಂಪ್ ಹೇಳಿದರು. ಒಪ್ಪಂದ ಕುರಿತು ಹೆಚ್ಚು ಮಾತನಾಡಲು ನಿರಾಕರಿಸಿದರು.