ಸಂಬಲ್‌ಪುರ: ಒಡಿಶಾದ ಸಂಬಲ್‌ಪುರ ನಗರದ ಮಣಪ್ಪುರಂ ಫೈನಾನ್ಸ್ ಶಾಖೆಯೊಂದರಲ್ಲಿ ದರೋಡೆಕೋರರು ಬರೋಬ್ಬರಿ 30 ಕೆ.ಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಗರದ ಮಣಪ್ಪುರಂ ಫೈನಾನ್ಸ್ ಶಾಖೆಯಲ್ಲಿ ಈ ಘಟನೆ ನಡೆದಿದೆ.
'ಸುಮಾರು ಹತ್ತು ಮಂದಿ ದರೋಡೆಕೋರರು ಹೆಲ್ಮೆಟ್ ಮತ್ತು ಮುಖವಾಡಗಳನ್ನು ಧರಿಸಿ ಏಕಾಏಕಿ ಶಾಖೆಗೆ ನುಗ್ಗಿ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಶಾಖೆಯ ವ್ಯವಸ್ಥಾಪಕರು ಸೇರಿದಂತೆ ಹಲವರನ್ನು ಕಟ್ಟಿ ಹಾಕಿ 30 ಕೆ.ಜಿ ಚಿನ್ನಾಭರಣ ಮತ್ತು ₹4 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಶಾಖೆಯ ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಡೆದ ಸ್ಥಳ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಕಂಪನಿಯ ಉದ್ಯೋಗಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಯಾವುದೇ ಸಿಬ್ಬಂದಿ ಅಥವಾ ಗ್ರಾಹಕರು ಗಾಯಗೊಂಡಿಲ್ಲ. ಕಂಪನಿಯ ಗ್ರಾಹಕರು ಆತಂಕ ಪಡುವ ಅಗತ್ಯತೆ ಇಲ್ಲ. ಕಂಪನಿಯು ನಿಮ್ಮ ಸ್ವತ್ತುಗಳಿಗೆ ಜವಾಬ್ದಾರಿಯಾಗಿದ್ದು, ನಷ್ಟವನ್ನು ತುಂಬಿಕೊಡಲಿದೆ ಎಂದು ಮಣಪ್ಪುರಂ ಫೈನಾನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.