ಲಾಹೋರ್: ಸಿಂಧ್ ಪ್ರಾಂತ್ಯದ ದೇಗುಲವೊಂದರ ಶಿವ ಅವತಾರಿ ಸದ್ಗುರು ಸಂತ ಶಾದರಾಮ್ ಸಾಹಿಬ್ ಅವರ 316ನೇ ಜನ್ಮದಿನವನ್ನು ಆಚರಿಸಲು 84 ಹಿಂದೂ ಯಾತ್ರಿಕರು ಭಾನುವಾರ ಭಾರತದಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ 1974ರ (ಪಾಕಿಸ್ತಾನ-ಭಾರತ) ಪ್ರೋಟೋಕಾಲ್‌ನ ಚೌಕಟ್ಟಿನ ಅಡಿಯಲ್ಲಿ ವೀಸಾಗಳ ವಿತರಣೆಯಾಗಿದೆ.
'ಶಿವನ ಅವತಾರವಾದ ಶ್ರೀ ಗುರು ಸ್ವಾಮಿ ಶಾದರಾಮ್ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಯುಶಿಷ್ಠರ್ ಲಾಲ್ ನೇತೃತ್ವದ ಸುಮಾರು 84 ಹಿಂದೂ ಯಾತ್ರಿಕರು ಭಾರತದಿಂದ ಇಲ್ಲಿಗೆ ಆಗಮಿಸಿದ್ದಾರೆ'ಎಂದು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ವಕ್ತಾರ ಗುಲಾಮ್ ಮೊಹಯುದ್ದೀನ್ ಪಿಟಿಐಗೆ ತಿಳಿಸಿದ್ದಾರೆ.
ಇಟಿಪಿಬಿಯ ಹೆಚ್ಚುವರಿ ಕಾರ್ಯದರ್ಶಿ ಸೈಫುಲ್ಲಾ ಖೋಖರ್ ಅವರು ವಾಘಾ ಗಡಿಯಲ್ಲಿ ಯಾತ್ರಾರ್ಥಿಗಳನ್ನು ಪುಣ್ಯಕ್ಷೇತ್ರಗಳಿಗೆ ಸ್ವಾಗತಿಸಿದರು. ಮಂಡಳಿಯ ಅಧ್ಯಕ್ಷ ಸೈಯದ್ ಅತಾ-ಉರ್-ರೆಹಮಾನ್ ಪರವಾಗಿ ಹೂಗುಚ್ಛಗಳನ್ನು ನೀಡಿದರು.
ಹಿಂದೂ ಯಾತ್ರಾರ್ಥಿಗಳು ವಾಘಾ ಗಡಿಯಿಂದ ನೇರವಾಗಿ ಶದಾನಿ ದರ್ಬಾರ್ ಹಯಾತ್ ಪಿಟಾಫಿ, ಸಿಂಧ್‌ಗೆ ತೆರಳಿದರು, ಅಲ್ಲಿ ಮುಖ್ಯ ಆಚರಣೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ತಮ್ಮ ವಾಸ್ತವ್ಯದ ಸಮಯದಲ್ಲಿ ಯಾತ್ರಿಕರು ಅಖಿಲ್‌ಪುರದ ಯೋಗ ಮಾತಾ ಮಂದಿರ, ಘೋಟ್ಕಿ, ಪನೋ ಅಕಿಲ್, ಸುಕ್ಕೂರ್ ಮತ್ತು ಐತಿಹಾಸಿಕ ಸಾಧು ಬೇಲಾ ದೇವಾಲಯ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಹಿಂದೂ ಯಾತ್ರಿಕರು ಜನವರಿ 14 ರಂದು ನಂಕಾನಾ ಸಾಹಿಬ್‌ನಲ್ಲಿ (ಸಿಖ್ ಧರ್ಮದ ಸಂಸ್ಥಾಪಕ ಬಾಬಾ ಗುರುನಾನಕ್ ಅವರ ಜನ್ಮಸ್ಥಳ) ಒಂದು ದಿನ ಉಳಿಯುತ್ತಾರೆ.ಮರುದಿನ ಭಾರತಕ್ಕೆ ಹಿಂತಿರುಗುತ್ತಾರೆ.