ತಿರುವನಂತಪುರಂ: ಕಲ್ಯಾಣ ಪಿಂಚಣಿ ಹಗರಣದಲ್ಲಿ ಲೋಕೋಪಯೋಗಿ ಇಲಾಖೆಯ 31 ಮಂದಿ ಅಮಾನತುಗೊಂಡಿದ್ದಾರೆ.
ಸಚಿವ ಮೊಹಮ್ಮದ್ ರಿಯಾಜ್ ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ಪಡೆದಿರುವ ಪಿಂಚಣಿ ಮೊತ್ತವನ್ನು ಶೇ.18ರ ಬಡ್ಡಿ ಸಮೇತ ಅಧಿಕಾರಿಗಳು ವಾಪಸ್ ನೀಡುವಂತೆ ಸೂಚಿಸಿ ತನಿಖೆ ವೇಳೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ 1458 ಸರ್ಕಾರಿ ನೌಕರರು ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವುದು ತಪಾಸಣೆಯಲ್ಲಿ ಪತ್ತೆಯಾಗಿತ್ತು. ಹಣಕಾಸು ಇಲಾಖೆ ನಿರ್ದೇಶನದಂತೆ ಮಾಹಿತಿ ಕೇರಳ ಮಿಷನ್ ನಡೆಸಿದ ತಪಾಸಣೆಯಲ್ಲಿ ವಂಚನೆ ಪತ್ತೆಯಾಗಿತ್ತು.
ಹೈಯರ್ ಸೆಕೆಂಡರಿ ಶಿಕ್ಷಕರು ಸೇರಿದಂತೆ ಕಾಲೇಜು ಸಹಾಯಕ ಪ್ರಾಧ್ಯಾಪಕರು ಕಲ್ಯಾಣ ಪಿಂಚಣಿ ಪಡೆಯುವವರ ಪಟ್ಟಿಯಲ್ಲಿದ್ದರು. ಅತಿ ಹೆಚ್ಚು ಮಂದಿ ಅಕ್ರಮವಾಗಿ ಕಲ್ಯಾಣ ಪಿಂಚಣಿ ಪಡೆದಿರುವುದು ಆರೋಗ್ಯ ಇಲಾಖೆಯಲ್ಲಿ (373 ಮಂದಿ). ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 224 ಮಂದಿ ಅಕ್ರಮವಾಗಿ ಕಲ್ಯಾಣ ಪಿಂಚಣಿ ಪಡೆಯುತ್ತಿರುವುದು ಕಂಡುಬಂದಿದೆ. ವಂಚಕರು ಪ್ರತಿ ತಿಂಗಳು ಸರ್ಕಾರದ ಬೊಕ್ಕಸದಿಂದ 23 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ತೆಗೆದುಕೊಂಡಿದ್ದಾರೆ.