ಹೈದರಾಬಾದ್: ನಗರದ ವಿವಿಧ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಲಿಂಗತ್ವ ಅಲ್ಪಸಂಖ್ಯಾತರ ಪೈಕಿ ಕೆಲವರು ಅದೇ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಕಾಯಕದಲ್ಲಿ ತೊಡಗಿದ್ದಾರೆ. ಇದು ಅವರ ಸಬಲೀಕರಣಕ್ಕೆ ನೆರವಾಗುತ್ತಿದೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಸೂಚನೆ ಮೇರೆಗೆ ಪೊಲೀಸ್ ಇಲಾಖೆಯು 39 ಲಿಂಗತ್ವ ಅಲ್ಪಸಂಖ್ಯಾತರನ್ನು ನಗರದ ಸಂಚಾರ ಸಹಾಯಕರನ್ನಾಗಿ ಪ್ರಾಯೋಗಿಕವಾಗಿ ನೇಮಿಸಿಕೊಂಡಿದೆ.
ಗೃಹ ರಕ್ಷಕ ದಳ ಸಿಬ್ಬಂದಿ ನೇಮಕಾತಿ ಮಾದರಿಯಲ್ಲಿಯೇ ಈ ನೇಮಕಾತಿಗಳನ್ನು ನಡೆಸಲಾಗಿದೆ.
ಹೀಗೆ ನೇಮಕಗೊಂಡವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಈ ಹಿಂದೆ ತಾವು ಎದುರಿಸಿದ್ದ ತಾರತಮ್ಯ, ಅವಮಾನಗಳಿಗೆ ಬದಲಿಯಾಗಿ, ಅವರೀಗ ಜನರು ಮತ್ತು ಸಮಾಜದಿಂದ ಗೌರವ ಪಡೆಯುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲಿಂಗತ್ವ ಅಲ್ಪಸಂಖ್ಯಾತ ಸಂಚಾರ ಸಹಾಯಕರಾದ ನಿಶಾ, 'ನಾವು ಎಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದೆವೊ ಅಲ್ಲಿಯೇ ಸಂಚಾರ ನಿಯಂತ್ರಣದ ಕಾರ್ಯ ನಿರ್ವಹಿಸುತ್ತಿರುವುದು ಖುಷಿ ತಂದಿದೆ. ಇದಕ್ಕಾಗಿ ಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸುತ್ತೇನೆ' ಎಂದರು.
12ನೇ ತರಗತಿವರೆಗೆ ಓದಿರುವ ನಿಶಾ, ಸ್ನೇಹಿತರು, ಪೋಷಕರಿಂದ ತಿರಸ್ಕೃತರಾಗಿದ್ದರು. ತಾರತಮ್ಯ ಧೋರಣೆಯಿಂದ ನೊಂದಿದ್ದರು.
'ಪೋಷಕರೂ ಆಗ ನನ್ನನ್ನು ಸ್ವೀಕರಿಸಿರಲಿಲ್ಲ. ಆದರೆ ಈಗ ಒಪ್ಪಿಕೊಂಡಿದ್ದಾರೆ. ನನ್ನನ್ನು ತಿರಸ್ಕರಿಸಿದ್ದ ಸ್ನೇಹಿತರು ಮಾತನಾಡಲಾರಂಭಿಸಿದ್ದಾರೆ. ನನಗೆ ಕೆಲಸ ದೊರೆತ ಬಳಿಕ ಸಂಬಂಧಿಕರು ಮತ್ತು ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ತುಂಬ ಸಂತಸವಾಗಿದೆ. ಅದನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ' ಎಂದು ಅವರು ಹೇಳಿದರು.
'ಮೊದಲಿಗೆ ಜನರು ನಮ್ಮೊಂದಿಗೆ ಮಾತನಾಡಲೂ ಹಿಂಜರಿಯುತ್ತಿದ್ದರು. ಆದರೆ ಈಗ ಮಾತನಾಡಿಸುತ್ತಾರೆ, ಗೌರವ ಕೊಡುತ್ತಾರೆ. ಅದು ಹೆಮ್ಮೆಯ ವಿಷಯ' ಎಂದು ಸಂಚಾರ ಸಹಾಯಕರಾಗಿ ನೇಮಕವಾಗಿರುವ ಮತ್ತೊಬ್ಬ ಲಿಂಗತ್ವ ಅಲ್ಪಸಂಖ್ಯಾತರಾದ ಸನಾ ಪ್ರತಿಕ್ರಿಯಿಸಿದರು.
'ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ 100 ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಿದ್ದರು. ದೈಹಿಕ ಪರೀಕ್ಷೆ ಸೇರಿದಂತೆ ಇತರ ಪ್ರಕ್ರಿಯೆಗಳ ಬಳಿಕ 44 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಯಿತು. 39 ಅಭ್ಯರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇವರಿಗೆ 2024ರ ಡಿಸೆಂಬರ್ 6ರಂದು ಮುಖ್ಯಮಂತ್ರಿ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ. ಅವರು ಡಿಸೆಂಬರ್ 22ರಿಂದ ಸಂಚಾರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ. ಆನಂದ್ ತಿಳಿಸಿದರು.