ನವದೆಹಲಿ: ಕಾಂಗ್ರೆಸ್‌ನ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಅಭಿಯಾನ ಜನವರಿ 3ರಿಂದ ಆರಂಭವಾಗಲಿದ್ದು, ಜನವರಿ 26ರಂದು ಮಧ್ಯಪ್ರದೇಶದ ಮಾಹೊವ್‌ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಕೊನೆಗೊಳ್ಳಲಿದೆ.
ಈ ವೇಳೆ ಪ್ರತಿ ಬ್ಲಾಕ್, ಜಿಲ್ಲೆ ಮತ್ತು ರಾಜ್ಯಗಳಲ್ಲಿ ರ್‍ಯಾಲಿಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
2024ರ ಡಿಸೆಂಬರ್ 27ರಂದು ಈ ಅಭಿಯಾನವನ್ನು ಬೆಳಗಾವಿಯಿಂದ ಪ್ರಾರಂಭಿಸಬೇಕಾಗಿತ್ತು. ಡಿಸೆಂಬರ್ 26ರಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ ಮತ್ತು ಅವರ ಗೌರವಾರ್ಥ 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದರಿಂದ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು.
ಡಿಸೆಂಬರ್ 26ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಕೊನೆಯ ಸಭೆಯಲ್ಲಿ ಅಭಿಯಾನ ಆಯೋಜಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಂವಿಧಾನ ರಕ್ಷಿಸುವ ಮತ್ತು ಭಾರತ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಉಳಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಸಿಡಬ್ಲ್ಯೂಸಿ ತನ್ನ ನಿರ್ಣಯದಲ್ಲಿ ತಿಳಿಸಿದೆ.
ಉಳಿದಂತೆ, 2025 ಜನವರಿ 26 ರಿಂದ 2026 ಜನವರಿ 26ರ ನಡುವೆ 'ಸಂವಿಧಾನ ಬಚಾವೊ ರಾಷ್ಟ್ರೀಯ ಪಾದಯಾತ್ರೆ' ಆಯೋಜಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಪಾದಯಾತ್ರೆಯು ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ ರಿಲೇ ರೂಪದಲ್ಲಿ ನಡೆಯಲಿದೆ ಎಂದು ತಿಳಿಸಿದೆ.
ಏಪ್ರಿಲ್ 2025ರ ಮೊದಲಾರ್ಧದಲ್ಲಿ ಎಐಸಿಸಿ ಅಧಿವೇಶನವು ಗುಜರಾತ್‌ನಲ್ಲಿ ನಡೆಯಲಿದೆ ಎಂದೂ ತಿಳಿಸಿದೆ.