HEALTH TIPS

ಜಿಂಬಾಬ್ವೆ: 40 ಸಿಂಹಗಳಿರುವ ಕಾಡಲ್ಲಿ ಕಳೆದುಹೋಗಿದ್ದ ಬಾಲಕ 5 ದಿನಗಳ ನಂತರ ಪತ್ತೆ!

ಜಿಂಬಾಬ್ವೆ :ಜಿಂಬಾಬ್ವೆಯ ಉತ್ತರಕ್ಕಿರುವ ರಾಷ್ಟ್ರೀಯ ಉದ್ಯಾನ 'ಮಟುಸಡೊನ ಗೇಮ್‌ ಪಾರ್ಕ್‌'ನಲ್ಲಿ ಸಿಂಹಗಳು ಭಾರಿ ಸಂಖ್ಯೆಯಲ್ಲಿವೆ. ಆನೆಗಳು ಮತ್ತು ಘೇಂಡಾಮೃಗಗಳಿಗೂ ಇದು ನೆಚ್ಚಿನ ಆವಾಸವಾಗಿದೆ. ಇಂತಹ ಉದ್ಯಾನದಲ್ಲಿ ಐದು ದಿನ ಕಳೆದುಹೋಗಿದ್ದ 8 ವರ್ಷದ ಬಾಲಕನೊಬ್ಬ ಜೀವಂತವಾಗಿ ಪತ್ತೆಯಾಗಿದ್ದಾನೆ.

ಜಿಂಬಾಬ್ವೆ ಸಂಸದೆ ಮುಟ್ಸಾ ಮುರೊಂಬೆಡ್ಝಿ ಅವರು ಎಕ್ಸ್‌/ಟ್ವಿಟರ್‌ನಲ್ಲಿ ಹೊಸ ವರ್ಷದ ದಿನ (ಜನವರಿ 1ರಂದು) ಈ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು 'ಪವಾಡ' ಎಂದು ಉದ್ಘರಿಸಿರುವ ಅವರು, ಕರಿಬಾ ಗ್ರಾಮೀಣ ಭಾಗವಾದ ನ್ಯಾಮಿನ್ಯಾಮಿಯಲ್ಲಿ ಕಸ್ವಿಸ್ವಾ ಸಮುದಾಯ ಇರುವ ಸೂಕ್ಷ್ಮ ಪ್ರದೇಶದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಬಾಲಕ ಅಚಾನಕ್ಕಾಗಿ ಗೇಮ್‌ ಪಾರ್ಕ್‌ ಪ್ರವೇಶಿಸಿದ್ದ ಎಂದು ತಿಳಿಸಿದ್ದಾರೆ.

'ಸುತ್ತಾಡಲು ಮನೆಯಿಂದ ಹೊರಗೆ ಹೋಗಿದ್ದ 8 ವರ್ಷದ ಬಾಲಕ ಟಿನೊಟೆಂಡ ಪುದು, ಹಾದಿ ತಪ್ಪಿ, ಮಟುಸಡೊನ ಗೇಮ್‌ ಪಾರ್ಕ್‌ ಪ್ರವೇಶಿಸಿದ್ದ. ಮಟುಸಡೊನ ಆಫ್ರಿಕಾ ಪಾರ್ಕ್‌ನ ರೇಂಜರ್‌ಗಳ ಕಣ್ಣಿಗೆ ಕಾಣಿಸಿಕೊಳ್ಳುವುದಕ್ಕೂ ಮುನ್ನ, ಹೊಗ್ವೆ ನದಿ ಸಮೀಪ ಭಯಾನಕ 5 ದಿನಗಳನ್ನು ಕಳೆದಿದ್ದ. ಸಿಂಹಗಳ ಘರ್ಜನೆ, ಆನೆಗಳ ಸಂಚಾರದ ನಡುವೆ ನದಿ ದಂಡೆಯ ಬಂಡೆಗಳ ಮೇಲೆಯೇ ನಿದ್ರಿಸುತ್ತಾ, ಕಾಡಿನ ಹಣ್ಣುಗಳನ್ನು ತಿಂದು ಹಸಿವು ನೀಗಿಸಿಕೊಂಡು, ಅಭೇದ್ಯವಾದ ಕಾಡಿನಲ್ಲಿ ಆ ಪುಟ್ಟ ಬಾಲಕ ಸುಮಾರು 23 ಕಿ.ಮೀ. ಅಲೆದಾಡಿದ್ದ' ಎಂದು ವಿವರಿಸಿದ್ದಾರೆ.

'ಪುಟ್ಟ ಬಾಲಕನ ಪತ್ತೆಗೆ ವಿರಮಿಸದೆ ಶ್ರಮಿಸಿದ ಉದ್ಯಾನದ ರೇಂಜರ್‌ಗಳು, ಬಾಲಕನಿಗೆ ದಾರಿ ಕಂಡುಕೊಳ್ಳಲು ನೆರವಾಗುವಂತೆ ರಾತ್ರಿ ಇಡೀ ಡ್ರಮ್‌ ಬಾರಿಸುತ್ತಿದ್ದ ನ್ಯಾಮಿನ್ಯಾಮಿ ಸಮುದಾಯ ಹಾಗೂ ಕಾರ್ಯಾಚರಣೆಗೆ ನೆರವಾದ ಎಲ್ಲರಿಗೂ ಕೃತಜ್ಞರಾಗಿದ್ದೇವೆ. ಎಲ್ಲಕ್ಕೂ ಮಿಗಿಲಾಗಿ ಟಿನೊಟೆಂಡನ ಮೇಲೆ ಕಣ್ಣಿಟ್ಟು, ಆತನಿಗೆ ದಾರಿ ತೋರಿದ ಭಗವಂತನಿಗೆ ಧನ್ಯವಾದ ಹೇಳುತ್ತೇವೆ. ಈ ಸಮಯವು ನಮ್ಮೆಲ್ಲರ ಒಗ್ಗಟ್ಟು, ಭರವಸೆ, ಪ್ರಾರ್ಥನೆಗೆ ಪರೀಕ್ಷೆಯೊಡ್ಡಿತ್ತು. ಏನೇ ಆದರೂ ಪ್ರಯತ್ನ ಬಿಡಬಾರದು ಎಂಬುದಕ್ಕೆ ಇದೊಂದು ನಿದರ್ಶನ' ಎಂದಿದ್ದಾರೆ.

ಕಾಡಿನ ಕುರಿತಾಗಿ ಬಾಲಕನಿಗೆ ಇದ್ದ ಅರಿವು, ಪ್ರಾಣ ಉಳಿಸಿಕೊಳ್ಳಲು ನೆರವಾಗಿದೆ.


ಕಳೆದ ವರ್ಷ ಡಿ. 27ರಂದು ನಾಪತ್ತೆ
'ಮನೆಯಿಂದ ಹೊರಗೆ ಹೋಗಿದ್ದ ಟಿನೊಟೆಂಡ ಪುದು ಎಂಬ ಬಾಲಕ 2024ರ ಡಿಸೆಂಬರ್‌ 27ರಂದು ನಾಪತ್ತೆಯಾಗಿದ್ದಾನೆ' ಎಂದು ಜಿಂಬಾಬ್ವೆ ಉದ್ಯಾನಗಳು ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರ (ಜಿಮ್‌ಪಾರ್ಕ್ಸ್‌) ಮಾಹಿತಿ ಹಂಚಿಕೊಂಡಿತ್ತು.

ಅದರ ಬೆನ್ನಲ್ಲೇ, ಅರಣ್ಯ ಸಿಬ್ಬಂದಿ, ಪೊಲೀಸರು, ಸ್ಥಳೀಯ ಸಮುದಾಯದ ಜನರು ಹುಡುಕಾಟಕ್ಕೆ ಇಳಿದಿದ್ದರು. ಭಾರಿ ಮಳೆಯಿಂದಾಗಿ, ಬಾಲಕನ ಹೆಜ್ಜೆ ಗುರುತು ಅನುಸರಿಸುವುದೂ ಕಷ್ಟವಾಗಿತ್ತು.

'ಬಾಲಕ ತನ್ನ ಗ್ರಾಮದಿಂದ ಶುರು ಮಾಡಿ, ಸಿಂಹಗಳಿಂದ ತುಂಬಿರುವ ಮಟುಸಡೊನ ಗೇಮ್‌ ಪಾರ್ಕ್‌ನಲ್ಲಿ ಪತ್ತೆಯಾಗುವವರೆಗೆ ಸುಮಾರು 49 ಕಿ.ಮೀ ನಡೆದಾಡಿರಬಹುದು' ಎಂದು ಜಿಮ್‌ಪಾರ್ಕ್ಸ್‌ ಅಂದಾಜಿಸಿದೆ.

'ಅರಣ್ಯ ಸಿಬ್ಬಂದಿಯ ಕಾರಿನ ಶಬ್ದ ಕೇಳಿಸಿಕೊಂಡ ಬಾಲಕ, ಓಡಿ ಬರುವಷ್ಟರಲ್ಲಿ ವಾಹನ ಮುಂದಕ್ಕೆ ಹೋಗಿತ್ತು. ಆದರೆ, ಸಿಬ್ಬಂದಿ ಅದೇ ಮಾರ್ಗದಲ್ಲಿ ಹಿಂದಿರುಗಿದಾಗ, ಬಾಲಕ ಆಗಷ್ಟೇ ಓಡಾಡಿರುವ ಕುರುಹುಗಳಿರುವುದನ್ನು ಗಮನಿಸಿದ್ದರು. ಅದರಂತೆ ಹುಡುಕಾಡಿದಾಗ, ಆ ಸ್ಥಳದ ಆಸುಪಾಸಿನಲ್ಲೇ ಪತ್ತೆಯಾಗಿದ್ದಾನೆ' ಎಂದು ಬಿಬಿಸಿ ವರದಿ ಮಾಡಿದೆ.

ಬಾಲಕ ಕಳೆದುಹೋಗಿದ್ದ ಪಾರ್ಕ್‌ನಲ್ಲಿ ಸುಮಾರು 40 ಸಿಂಹಗಳಿವೆ. ಅಂದಾಜು 1,470 ಚದರ ಕಿ.ಮೀ ವಿಸ್ತೀರ್ಣ ಇರುವ ಈ ಪಾರ್ಕ್‌, ಒಂದು ಸಮಯದಲ್ಲಿ ಆಫ್ರಿಕಾದಲ್ಲೇ ಅತಿ ಹೆಚ್ಚು ಸಿಂಹಗಳಿರುವ ಉದ್ಯಾನ ಎನಿಸಿತ್ತು ಎಂದು ಆಫ್ರಿಕಾ ಪಾರ್ಕ್ಸ್‌ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries