HEALTH TIPS

ಅಂಡರ್ ವಾಟರ್ ಡ್ರೋನ್, ಕೃತಕ ಬುದ್ಧಿಮತ್ತೆ ಕ್ಯಾಮೆರಾ, 45 ಕೋಟಿ ಭಕ್ತರು, 2 ಲಕ್ಷ ಕೋಟಿ ರೂ ಆದಾಯ: 2025 ಮಹಾ ಕುಂಭಮೇಳದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು!

ಪ್ರಯಾಗ್ ರಾಜ್: 12 ವರ್ಷಗಳಿಗೊಮ್ಮೆ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದ್ದು, ಜಗತ್ತಿನ ಈ ಅತೀ ದೊಡ್ಡ ಧಾರ್ಮಿಕ ಪವಿತ್ರ ಕಾರ್ಯಕ್ರಮದಲ್ಲಿ ಬರೊಬ್ಬರಿ 45 ಕೋಟಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

ಹೌದು.. ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಇಂದಿನಿಂದ ಆರಂಭವಾಗಿದ್ದು, ಸಾಧು–ಸಂತರು ಸೇರಿ ಬರೊಬ್ಬರಿ 45 ಕೋಟಿಯಷ್ಟು ಭಕ್ತರ ಮಹಾಪೂರವೇ ಇಲ್ಲಿಗೆ ಹರಿದು ಬರುತ್ತಿದೆ. ಜನವರಿ 13ರಿಂದ ಫೆಬ್ರವರಿ ಫೆಬ್ರುವರಿ 26ರವರೆಗೆ 45 ದಿನ ನಡೆಯುವ ಮೇಳದಲ್ಲಿ ದೇಶ–ವಿದೇಶಗಳಿಂದ ಭಕ್ತರು ಭಾಗವಹಿಸಲಿದ್ದಾರೆ.

ಮಹಾ ಕುಂಭಮೇಳದ ಬಗ್ಗೆ

ಗಂಗಾ, ಯಮುನಾ ನದಿಗಳ ಸಂಗಮ ಸ್ಥಳ. ಗುಪ್ತಗಾಮಿನಿಯಾದ ಸರಸ್ವತಿ ನದಿಯೂ ಪ್ರಯಾಗ್‌ರಾಜ್‌ನಲ್ಲಿ ಸಂಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಪುಷ್ಯ ಪೂರ್ಣಿಮೆಯ ಪವಿತ್ರ ದಿನದಂದು ಮಹಾಕುಂಭ (ಪವಿತ್ರ) ಸ್ನಾನ ಮಾಡುವುದು ಭಕ್ತಾದಿಗಳ ಬಯಕೆಯಾಗಿದೆ. 2019ರಲ್ಲಿ ಕುಂಭ ಮೇಳ ನಡೆದಿತ್ತು. ಈ ಬಾರಿ ನಡೆಯುತ್ತಿರುವುದು 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ.

ಹಿಂದಿನ ಬಾರಿ ಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು. ಈ ಬಾರಿ ಮಹಾಕುಂಭ ಮೇಳದಲ್ಲಿ 45 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಉತ್ತರ ಪ್ರದೇಶ ಸರ್ಕಾರವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಅಭೂತಪೂರ್ವ ಭದ್ರತಾ ವ್ಯವಸ್ಥೆ

ಮಹಾ ಕುಂಭ ಮೇಳದಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉತ್ತರ ಪ್ರದೇಶ ಪೊಲೀಸರು ನಗರದಾದ್ಯಂತ ಬೃಹತ್ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಸಾಮಾಜಿಕ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಅನಪೇಕ್ಷಿತ ಪೋಸ್ಟ್‌ಗಳನ್ನು ಪತ್ತೆ ಹಚ್ಚಿ, ಅವು ಹರಡದಂತೆ ತಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ನಡುವೆ ಅತ್ಯುತ್ತಮ ಸಮನ್ವಯ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರೊಳಗಿನ ಡ್ರೋನ್, ಎಐ ಕ್ಯಾಮೆರಾಗಳು

ಸಂಗಮ್ ಪ್ರದೇಶದಲ್ಲಿ 24/7 ಕಣ್ಗಾವಲು ಒದಗಿಸಲು ನಗರದಾದ್ಯಂತ 100 ಮೀಟರ್ ವರೆಗೆ ಡೈವಿಂಗ್ ಸಾಮರ್ಥ್ಯವಿರುವ ಅಂಡರ್ ವಾಟರ್ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಈ ವಿಶೇಷ ಡ್ರೋನ್ ಗಳ ಜೊತೆ 120 ಮೀಟರ್ ಎತ್ತರವನ್ನು ತಲುಪುವ ಸಾಮರ್ಥ್ಯವಿರುವ ಟೆಥರ್ಡ್ ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದ್ದು, ಇದು ಜನಸಂದಣಿ ಅಥವಾ ವೈದ್ಯಕೀಯ ಅಥವಾ ಭದ್ರತಾ ಹಸ್ತಕ್ಷೇಪದ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ವೈಮಾನಿಕ ವೀಕ್ಷಣೆಗಳನ್ನು ಒದಗಿಸುತ್ತದೆ.

ಅಂತೆಯೇ ನೈಜ-ಸಮಯದ ಮೇಲ್ವಿಚಾರಣೆ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಒದಗಿಸುವ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಹೊಂದಿರುವ ಕನಿಷ್ಠ 2,700 ಕ್ಯಾಮೆರಾಗಳನ್ನು ಪ್ರವೇಶ ಬಿಂದುಗಳಲ್ಲಿ ಬಳಸಲಾಗುತ್ತದೆ. ಇದರ ಹೊರತಾಗಿ, 56 ಸೈಬರ್ ಯೋಧರ ತಂಡವು ಆನ್‌ಲೈನ್ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಲಕ್ಷಾಂತರ ಶೌಚಾಲಯ, ತಾತ್ಕಾಲಿಕ ತಂಗುದಾಣ

ಹೆಚ್ಚುವರಿ ಶೌಚಾಲಯಗಳು ಮತ್ತು ನೈರ್ಮಲ್ಯ ಸೌಲಭ್ಯಗಳೊಂದಿಗೆ ಯಾತ್ರಿಕರಿಗೆ ಅವಕಾಶ ಕಲ್ಪಿಸಲು ಅಧಿಕಾರಿಗಳು 150,000 ಡೇರೆಗಳನ್ನು ಸ್ಥಾಪಿಸಿದ್ದಾರೆ. ಕನಿಷ್ಠ 450,000 ಹೊಸ ವಿದ್ಯುತ್ ಸಂಪರ್ಕಗಳನ್ನು ಸ್ಥಾಪಿಸಲಾಗಿದ್ದು, ಕುಂಭ ಮೇಳವು ಈ ಪ್ರದೇಶದ 100,000 ನಗರ ಅಪಾರ್ಟ್‌ಮೆಂಟ್‌ಗಳು ಒಂದು ತಿಂಗಳಲ್ಲಿ ಬಳಸುವುದಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಕ್ತರಿಗಾಗಿ ಹಲವಾರು ವಿದ್ಯುತ್ ಬಸ್‌ಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಸಹ ಸ್ಥಾಪಿಸಲಾಗಿದೆ. ಭಾರತೀಯ ರೈಲ್ವೆಯು ಹಬ್ಬದ ಸಮಯದಲ್ಲಿ 3,300 ಟ್ರಿಪ್‌ಗಳನ್ನು ಮಾಡುವ 98 ವಿಶೇಷ ರೈಲುಗಳನ್ನು ಪರಿಚಯಿಸಿದೆ.

ಇದರ ಹೊರತಾಗಿ, ಅಧಿಕಾರಿಗಳು ನಗರದಲ್ಲಿ 92 ರಸ್ತೆಗಳ ನವೀಕರಣ, 30 ಸೇತುವೆಗಳ ನಿರ್ಮಾಣ ಮತ್ತು 800 ಬಹುಭಾಷಾ ಫಲಕಗಳ ಸ್ಥಾಪನೆಯನ್ನು ಮಾಡಿದ್ದಾರೆ. ಆರೋಗ್ಯ ಸೌಲಭ್ಯಗಳಿಗಾಗಿ, ಶಸ್ತ್ರಚಿಕಿತ್ಸಾ ಮತ್ತು ರೋಗನಿರ್ಣಯ ಸೌಲಭ್ಯಗಳನ್ನು ಹೊಂದಿರುವ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಮಹಾಕುಂಭ ಮೇಳಕ್ಕಾಗಿ ಮಹಾಕುಂಭ ನಗರ ಎನ್ನುವ ತಾತ್ಕಾಲಿಕ ನಗರವನ್ನೇ ಸೃಷ್ಟಿಸಲಾಗಿದ್ದು, ಈ ಪ್ರದೇಶವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿದೆ. ಪ್ರತಿ ದಿನ ಇಲ್ಲಿ 50 ಲಕ್ಷದಿಂದ 1 ಕೋಟಿ ಭಕ್ತರಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ.

ಪ್ರವಾಸೋಧ್ಯಮಕ್ಕೆ ಆದ್ಯತೆ

ಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಲಾಗಿದೆ. ಜಗತ್ತಿನ ವಿವಿಧೆಡೆಯಿಂದ ಬರುತ್ತಿರುವ ಜನರಿಗಾಗಿ ರೈಲು, ಬಸ್ ಹಾಗೂ ವಿಮಾನ ಸಂಚಾರದ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಾರತದ ವಿವಿಧ ನಗರಗಳಿಂದ ಪ್ರಯಾಗ್‌ರಾಜ್‌ಗೆ ವಿಮಾನ ಸೌಕರ್ಯ ಕಲ್ಪಿಸಲಾಗಿದೆ. ವಿದೇಶದಿಂದ ಬರುವ ಪ್ರವಾಸಿಗರು, ವಿದ್ವಾಂಸರು, ಸಂಶೋಧಕರು ಮುಂತಾದವರಿಗಾಗಿ 5,000 ಚದರ ಅಡಿ ಜಾಗದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಪ್ರವಾಸಿಗರು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿರಿಮೆಯನ್ನು ಹಾಗೂ ಕುಂಭಮೇಳದ ಹಿನ್ನೆಲೆಯನ್ನು ತಿಳಿಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಜತೆಗೆ ಭಾರತದಲ್ಲಿ ಅವರ ನೆಚ್ಚಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲೂ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಟೋಲ್ ಫ್ರೀ ನಂಬರ್ ಅನ್ನು ಸಜ್ಜುಗೊಳಿಸಲಾಗಿದೆ. ಅದು 10 ವಿದೇಶಿ ಭಾಷೆಗಳು ಮತ್ತು ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಮಾಹಿತಿ ನೀಡಲಿದೆ. ಭಕ್ತರ ಅನುಕೂಲಕ್ಕಾಗಿ ಡಿಜಿಟಲ್ ಪ್ರವಾಸಿ ನಕ್ಷೆಗಳನ್ನು ರೂಪಿಸಲಾಗಿದೆ. ಎಐ ಮೂಲಕ ಶೌಚಾಲಯಗಳ ನೈರ್ಮಲ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಜತೆಗೆ, ಎಐ ಪ್ರೇರಿತ ಸ್ಮಾರ್ಟ್‌ಫೋನ್‌ಗಳ ಮೂಲಕ ರಕ್ಷಣಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.

AI ಚಾಟ್ ಬಾಟ್

ಕುಂಭ ಸಹ'ಐ'ಯಕ್ ಚಾಟ್‌ಬಾಟ್ ಒಂದು ಅತ್ಯಾಧುನಿಕ AI ಸಾಧನವಾಗಿದ್ದು, ಮಹಾ ಕುಂಭಮೇಳ 2025 ರಲ್ಲಿ ಭಾಗವಹಿಸುವ ಭಕ್ತರಿಗೆ ನೈಜ-ಸಮಯದ ಮಾರ್ಗದರ್ಶನ ಮತ್ತು ನವೀಕರಣಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಲಕ್ಷಾಂತರ ಭಕ್ತರಿಗೆ ಡಿಜಿಟಲ್ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಕೆಲವು ಪ್ರಮುಖ ವೈಶಿಷ್ಟ್ಯಗಳಲ್ಲಿ ಬಹುಭಾಷಾ ಬೆಂಬಲ, ಸಂವಾದಾತ್ಮಕ ತೊಡಗಿಸಿಕೊಳ್ಳುವಿಕೆ, ವೈಯಕ್ತಿಕ ಸಂಚರಣೆ ಮತ್ತು ಸಾಂಸ್ಕೃತಿಕ ಒಳನೋಟಗಳು ಸೇರಿವೆ. ಇದನ್ನು ಅಧಿಕೃತ ಮಹಾ ಕುಂಭ 2025 ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ WhatsApp ಮೂಲಕ ಪ್ರವೇಶಿಸಬಹುದು.

2 ಟ್ರಿಲಿಯನ್ ಆದಾಯ

ಕಳೆದ ಬಾರಿ 7,900 ಎಕರೆ ಜಾಗದಲ್ಲಿ ಕುಂಭ ಮೇಳ ಆಯೋಜಿಸಲಾಗಿತ್ತು. ಈ ಬಾರಿ ಶೇ 25ರಷ್ಟು ಹೆಚ್ಚು ಸ್ಥಳವನ್ನು ಮಹಾಕುಂಭ ಮೇಳಕ್ಕಾಗಿ ಬಳಸಿಕೊಳ್ಳಲಾಗಿದೆ. ಕಳೆದ ಬಾರಿ 3,500 ಕೋಟಿ ರೂ ವೆಚ್ಚದಲ್ಲಿ ಕುಂಭಮೇಳ ನಡೆದಿತ್ತು. ಈ ಬಾರಿ ಮಹಾಕುಂಭ ಮೇಳದ ವೆಚ್ಚ ಅದರ ಎರಡರಷ್ಟಿದೆ. 2019ರಲ್ಲಿ ನಡೆದಿದ್ದ ಕುಂಭ ಮೇಳದ ಘಾಟ್‌ಗಳ ಉದ್ದ 8 ಕಿ.ಮೀ.ಇತ್ತು. ಈ ಬಾರಿ ಅದನ್ನು 12 ಕಿ.ಮೀ.ಗೆ ಹೆಚ್ಚಿಸಲಾಗಿದೆ. ರೈಲು, ಹೆದ್ದಾರಿ ಪ್ರಯಾಣದ ವ್ಯವಸ್ಥೆಯಲ್ಲೂ ಇದೇ ರೀತಿಯ ಹೆಚ್ಚಳವಾಗಿದೆ. ಹೀಗಾಗಿ ಈ ಬಾರಿ ಮಹಾ ಕುಂಭಮೇಳದ ಆದಾಯ ಕೂಡ ಈ ಹಿಂದಿನ ಮೇಳಕ್ಕಿಂತ ದುಪ್ಪಟ್ಟು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಒಂದು ಮೂಲಗಳ ಪ್ರಕಾರ ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಎಂದು ಕರೆಯಲ್ಪಡುವ ಸಹಸ್ರಮಾನಗಳಷ್ಟು ಹಳೆಯದಾದ ಕುಂಭಮೇಳವು ಪ್ರಯಾಗ್‌ರಾಜ್‌ಗೆ 40 ಕೋಟಿಗೂ ಹೆಚ್ಚು ಭಕ್ತರನ್ನು ಕರೆತರುವ ನಿರೀಕ್ಷೆಯಿದೆ. ಅಂದರೆ ಇದು ಅಮೆರಿಕ ಮತ್ತು ರಷ್ಯಾದ ಜನಸಂಖ್ಯೆಗಿಂತ ಹೆಚ್ಚಾಗಿದೆ. ಅಂತೆಯೇ 2025ರ ಮಹಾ ಕುಂಭ ಮೇಳವು ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು, ಈ ಧಾರ್ಮಿಕ ಸಭೆಯಿಂದ ಸರ್ಕಾರದ ಬೊಕ್ಕಸಕ್ಕೆ ಬರೊಬ್ಬರಿ 2 ಲಕ್ಷ ಕೋಟಿ ರೂ.ಗಳವರೆಗೆ ಆದಾಯ ಹರಿದು ಬರುವ ನಿರೀಕ್ಷೆಯಿದೆ.

ಅಂದಾಜಿನ ಪ್ರಕಾರ, 40 ಕೋಟಿ ಭಕ್ತರು ಸರಾಸರಿ 5 ಸಾವಿರ ರೂ.ಗಳನ್ನು ಖರ್ಚು ಮಾಡಿದರೂ ಈ ಕಾರ್ಯಕ್ರಮವು ಕನಿಷ್ಟ 2 ಲಕ್ಷ ಕೋಟಿ ರೂ.ಗಳ ಆದಾಯ ಗಳಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಅಂತೆಯೇ ಪ್ರತಿ ವ್ಯಕ್ತಿಯ ಸರಾಸರಿ ಖರ್ಚು 10,000 ರೂ.ಗಳಿಗೆ ಏರಬಹುದು. ಇದರಿಂದ ಸರ್ಕಾರದ ಆದಾಯ 4 ಲಕ್ಷ ಕೋಟಿ ರೂ.ಗಳನ್ನು ತಲುಪಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಅರ್ಧಕುಂಭಮೇಳದಿಂದ 1.2 ಲಕ್ಷ ಕೋಟಿ ರೂ ಆದಾಯ

ಇನ್ನು ಈ ಹಿಂದೆ ಅಂದರೆ 2019 ರಲ್ಲಿ ನಡೆದ ಪ್ರಯಾಗ್‌ರಾಜ್‌ನ ಅರ್ಧ ಕುಂಭಮೇಳದಿಂದಾಗಿ ಉತ್ತರ ಪ್ರದೇಶ ರಾಜ್ಯಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ಬಂದಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. 2019 ರಲ್ಲಿ ನಡೆದ ಅರ್ಧ ಕುಂಭಮೇಳವು ಸುಮಾರು 24 ಕೋಟಿ ಭಕ್ತರನ್ನು ಆಕರ್ಷಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries