ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇ.ಸಿ) ನೇಮಕವನ್ನು 2023ರಲ್ಲಿ ರೂಪಿಸಿದ ಕಾಯ್ದೆಗೆ ಅನುಗುಣವಾಗಿ ನಡೆಸಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಫೆಬ್ರುವರಿ 4ರಂದು ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ತೀರ್ಮಾನಿಸಿದೆ.
ಹಾಲಿ ಸಿಇಸಿ ರಾಜೀವ್ ಕುಮಾರ್ ಅವರು ಫೆಬ್ರುವರಿ 18ರಂದು ನಿವೃತ್ತರಾಗಲಿದ್ದಾರೆ, ಹೊಸ ಕಾಯ್ದೆಯ ಅಡಿಯಲ್ಲಿ ಇನ್ನೊಬ್ಬರು ಸಿಇಸಿ ನೇಮಕ ಆಗಲಿದೆ. ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಾಂಕರ್ ದತ್ತ ಮತ್ತು ಉಜ್ವಲ್ ಭೂಯಾನ್ ಅವರು ಇರುವ ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಿದರು.
ಸಿಇಸಿ ಮತ್ತು ಇ.ಸಿ. ನೇಮಕಕ್ಕೆ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಇರುವ ಸಮಿತಿಯನ್ನು ಸುಪ್ರೀಂ ಕೋರ್ಟ್ 2023ರ ಮಾರ್ಚ್‌ನ ತೀರ್ಪಿನ ಮೂಲಕ ರಚಿಸಿತ್ತು. ಆದರೆ 2023ರ ಡಿಸೆಂಬರ್‌ನಲ್ಲಿ ಕೇಂದ್ರವು 'ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಸೇವಾ ಷರತ್ತುಗಳು ಮತ್ತು ಅಧಿಕಾರ ಅವಧಿ) ಕಾಯ್ದೆ-2023'ನ್ನು ರೂಪಿಸಿತು. ಹೊಸ ಕಾಯ್ದೆಯು ಸಮಿತಿಯಲ್ಲಿ ಸಿಜೆಐ ಬದಲಿಗೆ, ಕೇಂದ್ರ ಸಚಿವರೊಬ್ಬರನ್ನು ಸದಸ್ಯರನ್ನಾಗಿಸಿದೆ ಎಂದು ಭೂಷಣ್ ಅವರು ವಿವರಿಸಿದರು.
ಈ ರೀತಿ ಮಾಡಿರುವುದು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ. ಚುನಾವಣಾ ಆಯುಕ್ತರ ನೇಮಕದ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರುವುದರಿಂದ ಪ್ರಜಾತಂತ್ರಕ್ಕೆ ಬೆದರಿಕೆ ಎದುರಾಗುತ್ತದೆ ಎಂದು ಭೂಷಣ್ ಹೇಳಿದರು.
ಯಾವುದಕ್ಕೆ ಹೆಚ್ಚು ಬೆಲೆ?
ಸಂವಿಧಾನದ 141ನೆಯ ವಿಧಿಯ ಅಡಿಯಲ್ಲಿ ಕೋರ್ಟ್ ಹೇಳುವ ಮಾತಿಗೆ ಹೆಚ್ಚಿನ ಬೆಲೆ ಇರುತ್ತದೆಯೋ ಅಥವಾ ಶಾಸನ ರೂಪಿಸುವ ಶಾಸಕಾಂಗದ ಅಧಿಕಾರಕ್ಕೆ ಹೆಚ್ಚಿನ ಬೆಲೆ ಇರುತ್ತದೆಯೋ ಎಂಬುದನ್ನು ಪರಿಶೀಲಿಸಬೇಕಿದೆ.