ವಿಶಾಖಪಟ್ಟಣ: ರಾಷ್ಟ್ರೀಯ ಹಸಿರು ಜಲಜನಕ ಕಾರ್ಯಕ್ರಮದಡಿ (ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್) 2030ರ ವೇಳೆಗೆ ದೇಶವು ವಾರ್ಷಿಕ 50 ಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
₹ 2 ಲಕ್ಷ ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮತ್ತು ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದೇಶದಲ್ಲಿ 2023ರಲ್ಲಿ ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್‌ಅನ್ನು ಆರಂಭಿಸಲಾಗಿದೆ.
'ಸ್ವರ್ಣಾಂಧ್ರಪ್ರದೇಶ-2047'ರ ಭಾಗವಾಗಿ ಆಂಧ್ರಪ್ರದೇಶವು 2047ರ ವೇಳೆಗೆ ದೊಡ್ಡ ಆರ್ಥಿಕತೆಯಾಗಿ ಬೆಳೆಯುವ ಗುರಿಯನ್ನು ಹೊಂದಿದೆ. ಅದನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಜತೆಯಾಗಿ ಕೆಲಸ ಮಾಡಲಿದೆ' ಎಂದು ಭರವಸೆ ನೀಡಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಮಂತ್ರಿ ಪವನ್ ಕಲ್ಯಾಣ್ ಅವರು ಪಾಲ್ಗೊಂಡರು. ಇದಕ್ಕೂ ಮುನ್ನ ವಿಶಾಖಪಟ್ಟಣಕ್ಕೆ ಬಂದಿಳಿದ ಪ್ರಧಾನಿ ಅವರನ್ನು ಸ್ವಾಗತಿಸಲು ಭರ್ಜರಿ ರೋಡ್ ಶೋ ನಡೆಸಲಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ಸೇರಿದ್ದ ಬಿಜೆಪಿ ಮತ್ತು ಟಿಡಿಪಿಯ ಸಾವಿರಾರು ಕಾರ್ಯಕರ್ತರು, ಪ್ರಧಾನಿ ಅವರಿದ್ದ ವಾಹನದತ್ತ ಹೂಮಳೆಗರೆದರು.