ಕಾಕಿನಾಡ: ಮೂವತ್ತರ ಹರೆಯಕ್ಕೆ ಜೀವನದ ಉತ್ಸಾಹ ಕಳೆದುಕೊಳ್ಳುವ ಕೆಲವರ ನಡುವೆ ಆಂಧ್ರ ಪ್ರದೇಶದ ಹಿರಿಯ ಮಹಿಳೆಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಸಮುದ್ರದಲ್ಲಿ ಬರೊಬ್ಬರಿ 150ಕಿ.ಮೀ ಈಜಿ ದಾಖಲೆ ನಿರ್ಮಿಸಿದ್ದಾರೆ.
ಹೌದು.. ಕಾಕಿನಾಡ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ 52ನೇ ವಯಸ್ಸಿನಲ್ಲೂ ಜೀವನದ ಅತಿ ದೊಡ್ಡ ಸಾಹಸ ಮಾಡಿದ್ದು, ಬಂಗಾಳ ಕೊಲ್ಲಿಯಲ್ಲಿ ಬರೊಬ್ಬರಿ 150 ಕಿಲೋಮೀಟರ್ ದೂರ ಈಜಿ ದಾಖಲೆ ಬರೆದಿದ್ದಾರೆ. ವಿಶಾಖಪಟ್ಟಣಂನಿಂದ ಆರಂಭವಾದ ಅವರ ಈಜಿನ ಸಾಹಸಗಾಥೆ ಅವರ ಹುಟ್ಟೂರಾದ ಕಾಕಿನಾಡದಲ್ಲಿ ಅಂದರೆ ಸುಮಾರು 150 ಕಿ.ಮೀ ದೂರದಲ್ಲಿ ಕೊನೆಗೊಂಡಿದೆ.
ಕೋರಮಂಡಲ್ ಒಡಿಸ್ಸಿ ಸಾಗರ ಈಜು ಸಂಸ್ಥೆಯ ಆಶ್ರಯದಲ್ಲಿ ಕಳೆದ ತಿಂಗಳು 28ರಂದು ವಿಶಾಖಪಟ್ಟಣಂ ಕರಾವಳಿಯಿಂದ ಕಾಕಿನಾಡ ಕರಾವಳಿವರೆಗೆ ಯಾತ್ರೆ ಆರಂಭಿಸಲಾಗಿತ್ತು. ಈ ಯಾತ್ರೆಯಲ್ಲಿ ಶಾಮಲಾ ಅವರು 2024ರ ಡಿಸೆಂಬರ್ 28ರಂದು ತಮ್ಮ ಈಜಿನ ಜರ್ನಿಯನ್ನು ವಿಶಾಖಪಟ್ಟಣಂನ ಆರ್ ಕೆ ಬೀಚ್ ನಲ್ಲಿ ಆರಂಭಿಸಿದ್ದರು. ಸಮುದ್ರದಲ್ಲಿ ದಿನಕ್ಕೆ 30 ಕಿ.ಮೀ.ನಂತೆ 150 ಕಿ.ಮೀ ದೂರ ಈಜಿ ಜನವರಿ 4ರಂದು ಆಂಧ್ರ ಪ್ರದೇಶದ ಕಾಕಿನಾಡದ ಸೂರ್ಯರಾವ್ ಬೀಚ್ ತಲುಪಿದ್ದಾರೆ. ಅಚ್ಚರಿ ಎಂದರೆ ಶಾಮಲಾ ಅವರು ಸಮುದ್ರದಲ್ಲೇ ಈಜುತ್ತಾ ಹೊಸ ವರ್ಷಾಚರಣೆ ಮಾಡಿದ್ದು ವಿಶೇಷ.
ಅದ್ಧೂರಿ ಸ್ವಾಗತ
ಇನ್ನು ತಮ್ಮ ಹುಟ್ಟೂರು ಕಾಕಿನಾಡಕ್ಕೆ ಈಜಿನ ಮೂಲಕ ಬಂದ ಶಾಮಲಾ ಅವರನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಕಿನಾಡ ಸೀಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಿಇಒ ಮುರಳೀಧರ್, ಸ್ಥಳೀಯ ಶಾಸಕ ಚಿನ್ನರಾಜಪ್ಪ, ಕಾಕಿನಾಡ ಆಯುಕ್ತೆ ಭಾವನಾ ಮತ್ತಿತರರು ಉಪಸ್ಥಿತರಿದ್ದು ಶಾಮಲಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ಶಾಮಲಾ ಸಾಹಸಕ್ಕೆ ಸಿಎಂ ನಾಯ್ಡು ಫಿದಾ
ಇನ್ನು ಶಾಮಲಾ ಅವರ ಈಜಿನ ಸಾಹಸಕ್ಕೆ ಸ್ವತಃ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೂಡ ಫಿದಾ ಆಗಿದ್ದು, ಈ ಕುರಿತು ವಿಡಿಯೋ ಸಹಿತ ಟ್ವೀಟ್ ಮಾಡಿರುವ ಅವರು, '52ನೇ ವಯಸ್ಸಿನಲ್ಲಿ, ಗೋಲಿ ಶ್ಯಾಮಲಾ ಅವರು ವಿಶಾಖಪಟ್ಟಣಂನಿಂದ ಕಾಕಿನಾಡಕ್ಕೆ 150 ಕಿ.ಮೀ ಈಜಿರುವುದು ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪದ ಕಥೆಯಾಗಿದೆ. ಆರು ದಿನಗಳಲ್ಲಿ, ಆಂಧ್ರ ಪ್ರದೇಶದ ಈ ಮಗಳು ತನ್ನ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಅಂತಿಮವಾಗಿ ಧೈರ್ಯದಿಂದ ಜಯಗಳಿಸಿದ್ದಾರೆ. ಅವರ ಪ್ರಯಾಣವು ನಾರಿ ಶಕ್ತಿಯ ಉಜ್ವಲ ಉದಾಹರಣೆಯಷ್ಟೇ ಅಲ್ಲ, ಮಾನವ ಚೈತನ್ಯದ ಶಕ್ತಿಯ ಪ್ರತಿಬಿಂಬವಾಗಿದೆ. ತಮ್ಮ ಈ ಸಾಹಸದ ಮೂಲಕ ಅಮೂಲ್ಯ ಸಮುದ್ರ ಜೀವಿಗಳನ್ನು ರಕ್ಷಿಸುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ. ಅವರ ಶ್ಲಾಘನೀಯ ಸಾಧನೆಯ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ. ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಸಾಹಸಗಾಥೆ ಬಗ್ಗೆ ಮಾತನಾಡಿದ ಗೋಲಿ ಶಾಮಲಾ ಅವರು, "ನಾನು ಇಲ್ಲಿಗೆ ಈ ಪ್ರಯಾಣವನ್ನು ಕೈಗೊಂಡ ಕಾರಣ ಪ್ರವಾಸೋದ್ಯಮವನ್ನು ಉತ್ತೇಜಿಸುವುದು. ಈ ಕ್ಷೇತ್ರದ ಅಭಿವೃದ್ಧಿಗಾಗಿ. ಸರ್ಕಾರವು ತೆರೆದ ನೀರಿನಲ್ಲಿ ಈಜು ಮತ್ತು ಇತರ ಜಲ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು. ನಾನು ಏನೇ ಮಾಡಿದರೂ ಅದು ಜಾಗೃತಿಗಾಗಿ, ಮುಂದಿನ ಪೀಳಿಗೆ ಸವಾಲುಗಳನ್ನು ಎದುರಿಸುವಷ್ಟು ಧೈರ್ಯಶಾಲಿಯಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾರು ಈ ಗೋಲಿ ಶಾಮಲಾ?
ಗೋಲಿ ಶಾಮಲಾ ಅವರು ಮೂಲತಃ ಕಾಕಿನಾಡ ಜಿಲ್ಲೆಯ ಸಾಮರ್ಲಕೋಟದ ಮೂಲದವರು. ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಸಾಗರ-ಸಮುದ್ರಗಳಲ್ಲಿ ಈಜುವುದು ಅವರ ಅಚ್ಚುಮೆಚ್ಚಿನ ಹವ್ಯಾಸ. 2019ರಲ್ಲಿ ಅವರು ಬೇಸಿಗೆ ಈಜು ಶಿಬಿರಕ್ಕೆ ಸೇರಿದ್ದರು. ಆರಂಭದಲ್ಲಿ ಭಯಭೀತರಾಗಿದ್ದರೂ, ಕ್ರಮೇಣ ಈ ಕ್ರೀಡೆಯ ಬಗ್ಗೆ ಉತ್ಸಾಹ ಬೆಳೆಸಿಕೊಂಡರು. 2019ರಲ್ಲಿ ಬ್ರಿಟೀಷ್ ಸಾಹಸಿಯೋರ್ವನ ಈಜು ಸಾಧನೆ ನೋಡಿದ ಶಾಮಲಾ ಅವರಿಂದ ಸ್ಪೂರ್ತಿ ಪಡೆದು ತಾನೂ ಕೂಡ ಇಂತಹ ಸಾಧನೆ ಮಾಡಬೇಕು ಎಂದುಕೊಂಡರು.
ಬಳಿಕ ಈಜು ತರಬೇತುದಾರ ಜಾನ್ ಸಿದ್ದಿಕ್ ಅವರಿಂದ ಸಹಾಯ ಮತ್ತು ಮಾರ್ಗದರ್ಶನ ಪಡೆದು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ಅವರ ವಯಸ್ಸು ಒಲಿಂಪಿಕ್ಸ್ ಭಾಗವಹಿಸುವಿಕೆಗೆ ಅಡ್ಡಿಯಾಯಿತು. ಬಳಿಕ ಶ್ಯಾಮಲಾರ ತರಬೇತುದಾರ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಸ್ಪರ್ಧಿಸಲು ಪ್ರೋತ್ಸಾಹಿಸಿದರು. ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು. ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ ಶಾಮಲಾ ಅವರು ತಮ್ಮ ಮೊದಲ ಸ್ಪರ್ಧೆಯಲ್ಲೇ ಆರನೇ ಸ್ಥಾನ ಪಡೆದರು.