ಅಹಮದಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮಾಜಿ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರಿಗೆ ಐದು ವರ್ಷ ಜೈಲು ಶಿಕ್ಷೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ ವಿಧಿಸಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಎಂ. ಸೋಜಿತ್ರಾ ಅವರು 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2)ರ ಅಡಿಯಲ್ಲಿ, ಸರ್ಕಾರಿ ನೌಕರ/ಅಧಿಕಾರಿ ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡು ಲಾಭ ಪಡೆದ ಮತ್ತು ಕ್ರಿಮಿನಲ್ ದುಷ್ಕೃತ್ಯ ಎಸಗಿರುವ ಆರೋಪದಲ್ಲಿ ಶರ್ಮಾ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದರು.
ಸೋಮವಾರ ಸಂಜೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಕಾರಣ ತೀರ್ಪಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ. ಮಾಜಿ ಐಎಎಸ್ ತನ್ನ ಪತ್ನಿ ಶ್ಯಾಮಲಾ ಅವರನ್ನು ವ್ಯಾಲ್ಯೂ ಪ್ಯಾಕೇಜಿಂಗ್ ಸಂಸ್ಥೆಯಲ್ಲಿ ಪಾಲುದಾರರನ್ನಾಗಿಸಿ, ಈ ಸಂಸ್ಥೆಗೆ ಕಡಿಮೆ ದರಕ್ಕೆ ಭೂಮಿ ಮಂಜೂರು ಮಾಡಿರುವುದು ಮತ್ತು ಲಂಚ ಪಡೆದ ಪ್ರಕರಣದಲ್ಲಿ ಶರ್ಮಾಗೆ ಶಿಕ್ಷೆಯಾಗಿದೆ ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಆರ್.ಸಿ.ಕೊಡೆಕಾರ್ ಹೇಳಿದರು.
ಪ್ರದೀಪ್ ಶರ್ಮಾ ಅವರ ಮೇಲೆ ಸುಮಾರು ಒಂದು ಡಜನ್‌ಗೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ. ಎಲ್ಲವೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದಾಗಿವೆ. ಈ ಹಿಂದೆ 2023ರಲ್ಲಿ ಕಚ್ ಜಿಲ್ಲೆಯ ಭುಜ್ ಜೈಲಿನಲ್ಲಿ ಫೋನ್ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಅವರಿಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಸರ್ಕಾರದೊಂದಿಗೆ ವೈಷಮ್ಯ ಹೊಂದಿದ್ದ ಮಾಜಿ ಐಎಎಸ್ ಅಧಿಕಾರಿ ದೋಷಿ ಮತ್ತು ಶಿಕ್ಷೆಗೆ ಗುರಿಯಾದ ಮೊದಲ ಪ್ರಮುಖ ಪ್ರಕರಣ ಇದು ಎನಿಸಿದೆ.