ಕುಂಬಳೆ: ಪರಿಶಿಷ್ಟ ಪಂಗಡದ(ಎಸ್.ಟಿ) ಕುಟುಂಬವೊಂದು ಕುಂಬಳೆ ಪ್ರೆಸ್ ಪೋರಂನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟು ತಮ್ಮ ಅಸ್ತಿತ್ವವನ್ನು ಉಳಿಸಿಕೊಡುವಂತೆ ಅವಲತ್ತುಕೊಂಡ ಪ್ರಸಂಗ ನಡೆಯಿತು.
ಕಳೆದ 60 ವರ್ಷಗಳಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿರುವ ಭೂಮಿಯ ಮೇಲೆ ಅಧಿಕಾರಿಗಳು ಮಾಲೀಕತ್ವದ ಹಕ್ಕುಗಳನ್ನು ನೀಡುತ್ತಿಲ್ಲ ಎಂದು ಅವರು ತೀವ್ರ ಸಂಕಷ್ಟದ ಸ್ಥಿತಿಯನ್ನು ವಿವರಿಸಿದರು. ಬೇಳ ಗ್ರಾಮದ ಸರ್ವೆ ಸಂಖ್ಯೆ 193/1 ಪಿ.ಟಿ. ಸಂಖ್ಯೆಯಲ್ಲಿ ವಾಸಿಸುವ ದಿ. ಕೊರಗ ನಾಯ್ಕ ಅವರ ಪತ್ನಿ 77 ವರ್ಷದ ಅಕ್ಕು ಹೆಂಗ್ಸು ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಕಟ ತೋಡಿಕೊಂಡರು.
ಈ ಸಂಬಂಧ, ಕುಂಬಳೆಯ ಆರ್.ಟಿ.ಐ ಸಮಾಜ ಸೇವಕ ಕೇಶವ ನಾಯಕ್ ಅವರ ಸಹಾಯದಿಂದ, ತಹಶೀಲ್ದಾರ್ ರಿಂದ ಮೊದಲ್ಗೊಂಡು ರಾಷ್ಟ್ರಪತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರವರೆಗೆ ಎಲ್ಲರಿಗೂ ದೂರು ಸಲ್ಲಿಸಲಾಗಿರುವುದನ್ನು ದಾಖಲೆ ಸಹಿತ ತೋರಿಸಿದರು. ಕುಟುಂಬವು 2.54 ಎಕರೆ ಭೂಮಿಯನ್ನು ತಮ್ಮ ನಿಯಂತ್ರಣಕ್ಕೆ ನೀಡಬೇಕೆಂದು ಒತ್ತಾಯಿಸುತ್ತಿದೆ. ಪ್ರಸ್ತುತ ಪರಬಾರೆಯಾಗಿರುವ ಈ ಭೂಮಿಯ ಹಕ್ಕುಪತ್ರ ತಮಗೆ ಮಂಜೂರು ಮಾಡಬೇಕು.ಈ ಪೈಕಿ 1.72 ಎಕರೆ ಭೂಮಿಯನ್ನು ಈ ಹಿಂದೆ ಬೇರೆಯವರಿಗೆ ಮಂಜೂರು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ, ಆದರೆ ನಂತರ ಅದನ್ನು ರದ್ದುಗೊಳಿಸಲಾಯಿತು. 2008 ರ ವಿಶೇಷ ತಹಶೀಲ್ದಾರ್ (ಎಲ್.ಎ.), ಎಲ್.6-291/2006 ರ ಕ್ರಮಕ್ಕೆ ಅನುಗುಣ ರದ್ದುಗೊಳಿಸಲಾಗಿತ್ತು. ಎದುರು ಕಕ್ಷಿದಾರರು ಹೈಕೋರ್ಟ್‍ನಲ್ಲಿ ಸಲ್ಲಿಸಿದ ಪ್ರಕರಣದ ಪರಿಣಾಮವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು.
ಅಕ್ಕು ಹೆಂಗ್ಸು ಅವರ ಪುತ್ರ ಶ್ರೀಧರ ಅವರು ತಮಗೆ ಅರ್ಹವಾದ ಭೂಮಿಯನ್ನು ಪಡೆಯಲು ಕಂದಾಯ ಕಚೇರಿಗಳಿಗೆ ಹಲವು ವರ್ಷಗಳಿಂದ ಎಡತಾಕುತ್ತಲೇ ಇದ್ದಾರೆ. ಕೈತಪ್ಪಿರುವ ಭೂಮಿಯ ಹಕ್ಕಿಗಾಗಿ ಮನವಿಮಾಡಿದಾಗ 1.20 ಎಕರೆ ಮಂಜೂರು ಮಾಡಿ ಉಳಿದ ಭೂಮಿಯ ಸ್ವಾಧೀನ ಪ್ರಯತ್ನಗಳನ್ನು ಕೈಬಿಡುವಂತೆ ಅಧಿಕಾರಿಗಳೇ ಬೆದರಿಕೆಯೊಡ್ಡುತ್ತಿದ್ದು, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಯೆಂದು ಕಂದಾಯ ಇಲಾಖೆ ತಂಡ ಬೆದರಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕುಟುಂಬ ಸದಸ್ಯರು ಕಣ್ಣೀರಿಟ್ಟರು. ತಾವು ಪ್ರಸ್ತುತ ವಾಸಿಸುತ್ತಿರುವ ಸ್ಥಳ ಹಕ್ಕು ಸಾಧಿಸಿದ ಭೂಮಿಯಲ್ಲಿ ಒಂದು ಕೊಟ್ಟಿಗೆ ಮತ್ತು ದನದ ಕೊಟ್ಟಿಗೆ ಸೇರಿವೆ. ಕೆಲವು ಕಂದಾಯ ಅಧಿಕಾರಿಗಳ ಆರ್ಥಿಕ ಹಿತಾಸಕ್ತಿಗಳು ಭೂಮಿ ಹಂಚಿಕೆ ಮಾಡದಿರಲು ಕಾರಣ ಎಂದು ಕುಟುಂಬ ಆರೋಪಿಸಿದೆ. ಶಾಸಕರು ಮತ್ತು ಸಂಸದರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಮತ್ತು ಉಳಿದ ಭೂಮಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್.ಟಿ.ಐ ಕಾರ್ಯಕರ್ತ ಕೇಶವ ನಾಯಕ್, ಅಕ್ಕು ಹೆಂಗ್ಸು, ಅವರ ಪುತ್ರ ಶ್ರೀಧರ ನಾಯ್ಕ ಮತ್ತು ಪುತ್ರಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.