ವೆಂಟಿಯಾನ್ : ಲಾವೋಸ್‌ನಲ್ಲಿ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದ ಕೇಂದ್ರವೊಂದರಲ್ಲಿ ಉದ್ಯೋಗ ಮಾಡುತ್ತಿದ್ದ 67 ಭಾರತೀಯರನ್ನು ಸೋಮವಾರ ಭಾರತದ ರಾಯಭಾರ ಕಚೇರಿ ರಕ್ಷಿಸಿದೆ. ಮಾನವ ಕಳ್ಳಸಾಗಣೆ ಮೂಲಕ ಇವರಲ್ಲಿ ಕೆಲವರನ್ನು ಒತ್ತಾಯದಿಂದ ಇಲ್ಲಿ ಕೆಲಸಕ್ಕೆ ಇರಿಸಿಕೊಳ್ಳಲಾಗಿತ್ತು.
ಲಾವೋಸ್‌ನ ಬೊಕೆಯೊ ಪ್ರದೇಶದಲ್ಲಿರುವ ಗೋಲ್ಡನ್ ಟ್ರಯಾಂಗಲ್ ಸ್ಪೆಶಲ್ ಇಕನಾಮಿಕ್ ಜೋನ್ (ಜಿಟಿಎಸ್‌ಇಜೆಡ್) ಪ್ರದೇಶದಲ್ಲಿ ಈ ಕೇಂದ್ರ ಇತ್ತು. ಅಪರಾಧಿಗಳ ದೊಡ್ಡ ಸಿಂಡಿಕೇಟ್‌ವೊಂದು ಈ ಕೇಂದ್ರವನ್ನು ನಿಯಂತ್ರಿಸುತ್ತಿತ್ತು.
ಈ ಕೇಂದ್ರದಲ್ಲಿ ಉದ್ಯೋಗದಲ್ಲಿದ್ದ ಭಾರತೀಯರು ಸಹಾಯಕ್ಕಾಗಿ ರಾಯಭಾರ ಕಚೇರಿಗೆ ಮೊರೆ ಇಟ್ಟಿದ್ದರು. ರಾಯಭಾರ ಕಚೇರಿಯು ಲಾವೋಸ್‌ನ ಅಧಿಕಾರಿಗಳೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಬೊಕೆಯೊನಿಂದ ವೆಂಟಿಯಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗೆ 67 ಮಂದಿಯನ್ನು ಕರೆತರಲಾಗಿದೆ.