ಬೆಂಗಳೂರು: ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು 'ವಾರಕ್ಕೆ 70 ತಾಸು ಕೆಲಸ ಮಾಡಬೇಕು' ಎಂದು ಕೆಲವು ತಿಂಗಳ ಹಿಂದೆ ಹೇಳಿದ್ದು ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು. 'ಹೆಂಡತಿ ಓಡಿ ಹೋಗುತ್ತಾಳೆ' ಎನ್ನುವ ಮೂಲಕ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಖಾಸಗಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಅದಾನಿ ಅವರು ಈ ರೀತಿ ಹೇಳಿದ್ದಾರೆ. 'ಖಾಸಗಿ ಬದುಕು ಮತ್ತು ಉದ್ಯೋಗವನ್ನು ಹೇಗೆ ಸರಿದೂಗಿಸಿಕೊಳ್ಳಬೇಕು ಎಂಬುದನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ. ಒಬ್ಬರು ಕುಟುಂಬದೊಂದಿಗೆ ನಾಲ್ಕು ತಾಸಿನಷ್ಟು ಸಮಯ ಕಳೆಯಬಹುದು. ಇದರಿಂದ ಅವರು ಸಂತೋಷ ಪಡೆಯಬಹುದು. ಕೆಲವರು ದಿನಕ್ಕೆ ಎಂಟು ತಾಸು ಕೆಲಸ ಮಾಡಿ ಸಂತೋಷಪಡುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಹೆಂಡತಿ ಓಡಿ ಹೋಗುತ್ತಾಳೆ' ಎಂದು ಹೇಳಿದ್ದಾರೆ.
'ಉದ್ಯೋಗ ಹಾಗೂ ಖಾಸಗಿ ಬದುಕಿನ ಸಂತೋಷವು ವ್ಯಕ್ತಿಯೊಬ್ಬರ ವೈಯಕ್ತಿಕ ಸಂತೋಷದ ಜೊತೆಗೆ ಅವರು ಇಷ್ಟಪಡುವ ವ್ಯಕ್ತಿಯ ಸಂತೋಷವನ್ನೂ ಒಳಗೊಂಡಿದೆ' ಎಂದಿದ್ದಾರೆ.