ವಾರಾಣಸಿ: ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇಲ್ಲಿನ ಮದನಪುರ ಪ್ರದೇಶದಲ್ಲಿ ತಿಂಗಳ ಹಿಂದೆ ಪತ್ತೆಯಾಗಿದ್ದ ಶಿವ ದೇವಾಲಯದ ಬಾಗಿಲನ್ನು ಬುಧವಾರ ತೆರೆಯಲಾಗಿದೆ.
200 ವರ್ಷಗಳಷ್ಟು ಹಳೆಯದ್ದು ಎನ್ನಲಾದ ಸಿದ್ದೇಶ್ವರ ಮಹಾದೇವ ದೇವಾಲಯವನ್ನು ಹಿಂದೂ ಸಂಘಟನೆಯ ಸದಸ್ಯರು 2024ರ ನವೆಂಬರ್ 19ರಂದು ಪತ್ತೆ ಹಚ್ಚಿದ್ದರು.
70 ವರ್ಷಗಳಿಗೂ ಹೆಚ್ಚು ಸಮಯದಿಂದ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಗಿದೆ ಎಂದು ಹೇಳಿರುವ ಸನಾತನ ರಕ್ಷಾ ದಳ, ಪೂಜಾ ಕೈಂಕರ್ಯಗಳನ್ನು ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಅದರಂತೆ, ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿರುವ ಜಿಲ್ಲಾಡಳಿತ, ದೇವಾಲಯವನ್ನು ತೆರೆಯಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು, 'ದೇವಾಲಯವು ಸರ್ಕಾರಿ ಜಾಗದಲ್ಲಿದೆ. ಬೀಗ ತೆಗೆಯಲಾಗಿದೆ' ಎಂದಿದ್ದಾರೆ.
ದೇವಾಲಯಕ್ಕೆ ಬೀಗ ಜಡಿದಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ, ಈ ವಿಚಾರವನ್ನು ಸನಾತನ ರಕ್ಷಾ ದಳ ಸಂಘಟನೆಯು ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದರ ಬೆನ್ನಲ್ಲೇ, ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ, ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿತ್ತು.
ದೇಗುಲದ ಬಾಗಿಲು ತೆರೆಯುವ ವೇಳೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಸ್ಥಳೀಯರೂ ಸಹಕಾರ ನೀಡಿದರು ಎಂದು ವರ್ಮಾ ತಿಳಿಸಿದ್ದಾರೆ.
ದೇವಾಲಯದ ಒಳಗೆ, ಭಾರಿ ಪ್ರಮಾಣದ ಮಣ್ಣು, ಕಸದ ರಾಶಿ ತುಂಬಿತ್ತು. ಹಾನಿಯಾಗಿರುವ ಮೂರು ಶಿವಲಿಂಗಗಳು ಪತ್ತೆಯಾಗಿವೆ. ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ, ದೇವಾಲಯದ ಜೀರ್ಣೋದ್ಧಾರಕ್ಕೆ ಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ, ರಾಜ್ಯದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಆರನೇ ದೇವಾಲಯದ ಬಾಗಿಲು ತೆರೆದಂತಾಗಿದೆ. ಸಂಭಲ್ ಹಾಗೂ ಫಿರೋಜಾಬಾದ್‌ನಲ್ಲಿ ತಲಾ ಎರಡು ಮತ್ತು ಮೊರಾದಾಬಾದ್‌ನಲ್ಲಿ ಒಂದು ದೇವಾಲಯ ಬಾಗಿಲು ತೆರೆಯಲಾಗಿದೆ.