ನವದೆಹಲಿ: ದೇಶದಲ್ಲಿ 14ರಿಂದ 16 ವರ್ಷದೊಳಗಿನ ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ ಮಾಡಲು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಪಾಸ್‌ವರ್ಡ್‌ಗಳನ್ನು ಬದಲಾಯಿಸುವಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೇಗೆ ಬಳಸಬೇಕೆಂದು ತಿಳಿದಿದ್ದಾರೆ ಎಂದು ರಾಷ್ಟ್ರೀಯ ಮಟ್ಟದಲ್ಲಿ ನಡೆದ ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ (ಎಎಸ್‌ಇಆರ್) ತಿಳಿಸಿದೆ.
'ಪ್ರಥಮ ಪ್ರತಿಷ್ಠಾನ' ಸಹಯೋಗದಲ್ಲಿ ಸಮೀಕ್ಷೆ ಕೈಗೊಂಡು ಈ ವರದಿ ಸಿದ್ಧಪಡಿಸಲಾಗಿದೆ. ಸಮೀಕ್ಷಾ ತಂಡವು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 29 ರಾಜ್ಯಗಳ 605 ಜಿಲ್ಲೆಗಳಲ್ಲಿ 6 ಲಕ್ಷ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ.
10ರಲ್ಲಿ 9 ವಿದ್ಯಾರ್ಥಿಗಳು ಮನೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ. ಅದರಲ್ಲಿ 8 ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಅನ್ನು ಹೇಗೆ ಬಳಸಬೇಕೆಂದು ತಿಳಿದಿದ್ದಾರೆ. ಜತೆಗೆ ಶೇ 36.2ರಷ್ಟು ಬಾಲಕರು, ಶೇ 26.9ರಷ್ಟು ಬಾಲಕಿಯರು ತಮ್ಮ ಸ್ವಂತ ಸ್ಮಾರ್ಟ್‌ಫೋನ್ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
14-16 ವಯೋಮಾನದ ಶೇ 82.2ರಷ್ಟು ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಅನ್ನು ಹೇಗೆ ಬಳಸಬೇಕೆಂದು ತಿಳಿದಿದ್ದಾರೆ. ಇದರಲ್ಲಿ ಶೇ 57ರಷ್ಟು ವಿದ್ಯಾರ್ಥಿಗಳು ಸಮೀಕ್ಷೆಯ ಹಿಂದಿನ ವಾರದಲ್ಲಿ ಶೈಕ್ಷಣಿಕ ಚಟುವಟಿಕೆಗಾಗಿ ಸ್ಮಾರ್ಟ್‌ಫೋನ್ ಬಳಸಿದ್ದರೆ, ಶೇ 76ರಷ್ಟು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಿಗಾಗಿಯೇ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಮಾಧ್ಯಮಗಳನ್ನು ಬಳಸುವ ವಿದ್ಯಾರ್ಥಿಗಳಲ್ಲಿ ಆನ್‌ಲೈನ್‌ನಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮೂಲಭೂತ ಜ್ಞಾನ ಹೆಚ್ಚಾಗಿದೆ. ಶೇ 62ರಷ್ಟು ವಿದ್ಯಾರ್ಥಿಗಳಿಗೆ ಪ್ರೊಫೈಲ್ ಅನ್ನು ಹೇಗೆ ನಿರ್ಬಂಧಿಸುವುದು ಅಥವಾ ವರದಿ ಮಾಡುವುದು ಎಂಬುದು ತಿಳಿದಿದೆ. ಶೇ 55ರರಷ್ಟು ವಿದ್ಯಾರ್ಥಿಗಳಿಗೆ ಪ್ರೊಫೈಲ್ ಅನ್ನು ಹೇಗೆ ಖಾಸಗಿಯಾಗಿ ಇಟ್ಟುಕೊಳ್ಳಬೇಕು ಹಾಗೂ ಶೇ 57ರಷ್ಟು ವಿದ್ಯಾರ್ಥಿಗಳು ಪಾಸ್‌ವರ್ಡ್ ಹೇಗೆ ಬದಲಾಯಿಸಬೇಕೆಂದು ತಿಳಿದುಕೊಂಡಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದಂತಹ ಕೆಲವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಸ್ಮಾರ್ಟ್‌ಫೋನ್ ಬಳಸುವುದರಲ್ಲಿ ಬಾಲಕರಿಗಿಂತ ಬಾಲಕಿಯರು ಹೆಚ್ಚು ಸಕ್ರಿಯರಾಗಿದ್ದಾರೆ. ಕರ್ನಾಟಕದಲ್ಲಿ ಶೇ 81.4ರಷ್ಟು ಬಾಲಕರಿಗೆ ಹೋಲಿಸಿದರೆ ಶೇ 82.2ರಷ್ಟು ಬಾಲಕಿಯರು ಯೂಟ್ಯೂಬ್‌ನಲ್ಲಿ ವಿಡಿಯೊಗಳನ್ನು ವೀಕ್ಷಣೆ ಮಾಡಿದ್ದಾರೆ.