ನವದೆಹಲಿ: 76ನೇ ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು. 'ಪ್ರಳಯ್' ಖಂಡಾಂತರ ಕ್ಷಿಪಣಿಯ ಪ್ರದರ್ಶನದಿಂದ ಹಿಡಿದು ವಾಯುಸೇನೆ, ನೌಕಾಪಡೆ ಮತ್ತು ಭೂಸೇನೆಗಳು ಒಟ್ಟಾಗಿರುವ ಸ್ತಬ್ದಚಿತ್ರ ಪ್ರದರ್ಶನ ಗಮನ ಸೆಳೆಯಿತು.
ಮಹಿಳಾ ಸೇನಾಧಿಕಾರಿಯಿಂದ ರಾಷ್ಟ್ರಪತಿಗೆ ಸೆಲ್ಯೂಟ್
ಕ್ಯಾಪ್ಟನ್ ಡಿಂಪಲ್ ಸಿಂಗ್ ಭಾಟಿ ಅವರು ಚಲಿಸುವ ಮೋಟಾರ್ ಸೈಕಲ್ ಮೇಲೆ ನಿಂತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೆಲ್ಯೂಟ್ ಮಾಡಿದರು. ಈ ಮೂಲಕ ಚಲಿಸುವ ಮೋಟಾರ್ ಸೈಕಲ್ ಮೇಲೆ ನಿಂತು ರಾಷ್ಟ್ರಪತಿಗೆ ಸೆಲ್ಯೂಟ್ ನೀಡಿದ ಮೊದಲ ಮಹಿಳಾ ಸೇನಾಧಿಕಾರಿ ಎನ್ನುವ ದಾಖಲೆ ನಿರ್ಮಿಸಿದರು.
ವಾಯುಸೇನೆ, ನೌಕಾಪಡೆ ಮತ್ತು ಭೂಸೇನೆಗಳ ಸ್ಥಬ್ದಚಿತ್ರ
'ಸಶಕ್ತ್ ಔರ್ ಸುರಕ್ಷಿತ್ ಭಾರತ್' ಥೀಮ್‌ನಡಿಯಲ್ಲಿ ಇದೇ ಮೊದಲ ಬಾರಿಗೆ ವಾಯುಸೇನೆ, ನೌಕಾಪಡೆ ಮತ್ತು ಭೂಸೇನೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಸ್ತಬ್ದಚಿತ್ರವನ್ನು ಪ್ರದರ್ಶಿಸಲಾಯಿತು.
ಈ ಸ್ತಬ್ದಚಿತ್ರದಲ್ಲಿ ಅರ್ಜುನ್ ಯುದ್ಧ ಟ್ಯಾಂಕ್, ತೇಜಸ್ ಯುದ್ಧ ವಿಮಾನ ಮತ್ತು ಸುಧಾರಿತ ಲಘು ಹೆಲಿಕಾಪ್ಟರ್ ಅನ್ನು ಪ್ರದರ್ಶಿಸಲಾಯಿತು.
ಪ್ರಳಯ್ ಖಂಡಾಂತರ ಕ್ಷಿಪಣಿ ಪ್ರದರ್ಶನ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ದೇಶೀಯ ಖಂಡಾಂತರ ಕ್ಷಿಪಣಿ 'ಪ್ರಳಯ್' ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕಾಣಿಸಿಕೊಂಡಿತು. ಸೇನೆ ಮತ್ತು ವಾಯುಸೇನೆಗೆ ಉದ್ದೇಶಿಸಲಾಗಿರುವ ಈ ಕ್ಷಿಪಣಿಯು ಭಾರತದ ಶಸ್ತ್ರಾಗಾರದಲ್ಲಿರುವ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.
ಸಂಜಯ್
ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆ 'ಸಂಜಯ್' ಮೊದಲ ಬಾರಿ ಪಥಸಂಚಲನದಲ್ಲಿ ಕಾಣಿಸಿಕೊಂಡಿತು. ಸೇನೆಯ ಈ ಸ್ವಯಂಚಾಲಿತ ಕಣ್ಗಾವಲು ವ್ಯವಸ್ಥೆಯು, ಭದ್ರತಾ ಪಡೆಗಳ ಕಮಾಂಡರ್‌ಗಳು ಹಾಗೂ ಎಲ್ಲಾ ಹಂತಗಳ ಸಿಬ್ಬಂದಿಗೆ ಕಾರ್ಯಾಚರಣೆಯ ಕುರಿತಾದ ಸಮಗ್ರ ಚಿತ್ರಣ ಒದಗಿಸುವ ಹಾಗೂ ಅದರ ಆಧಾರದಲ್ಲಿ ಸೇನೆ ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ಇದಾಗಿದೆ.
ಇಂಡೋನೇಷ್ಯಾ ಸೇನಾ ತಂಡ ಭಾಗಿ
ಇಂಡೋನೇಷ್ಯಾದ 352 ಸದಸ್ಯರ ಪಥಸಂಚಲನ ಹಾಗೂ ಬ್ಯಾಂಡ್ ತಂಡ ಕರ್ತವ್ಯ ಪಥದಲ್ಲಿ ನಡೆದ ಪರೇಡ್‌ನಲ್ಲಿ ಪಾಲ್ಗೊಂಡಿತು. ವಿದೇಶದ ರಾಷ್ಟ್ರೀಯ ಸಮಾರಂಭದಲ್ಲಿ ಇಂಡೋನೇಷ್ಯಾದ ತಂಡ ಭಾಗವಹಿಸಿದ್ದು ಇದೇ ಮೊದಲು.
ಕರ್ತವ್ಯಪಥವನ್ನು ಚೆಂದವಾಗಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಈ ಬಾರಿ 5 ಸಾವಿರಕ್ಕೂ ಹೆಚ್ಚು ಜಾನಪದ ಮತ್ತು ಬುಡಕಟ್ಟು ಕಲಾವಿದರು ದೇಶದ ವಿವಿಧ ಭಾಗಗಳ 45 ರೀತಿಯ ನೃತ್ಯವನ್ನು ಪ್ರದರ್ಶಿಸಿದರು. ಇಡೀ ಕರ್ತವ್ಯಪಥ ಸಾಂಸ್ಕೃತಿಕ ಪ್ರದರ್ಶನಗಳಿಂದ ಕೂಡಿತ್ತು. ನೆರೆದ ಜನರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಸಂಗೀತ್ ನಾಟಕ ಅಕಾಡೆಮಿಯ ಸದಸ್ಯರು 'ಜಯತಿ ಜಯ ಮಹಾ ಭಾರತಮ್' ಗೀತೆಯನ್ನು 11 ನಿಮಿಷಗಳ ಕಾಲ ಹಾಡುವ ಮೂಲಕ ನೆರೆದವರನ್ನು ರಂಜಿಸಿದರು.
ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಪ್ರಸ್ತುತಪಡಿಸಿದ ಬುಡಕಟ್ಟು ಮತ್ತು ಜಾನಪದ ನೃತ್ಯ ಸಂಯೋಜನೆ ಕಣ್ಮನ ಸೆಳೆಯಿತು.